ಧಾರವಾಡ: ಧಾರವಾಡ ಜಿಲ್ಲೆಯ 120 ಗ್ರಾಮಗಳಲ್ಲಿ ಕೋವಿಡ್ ಮೊದಲ ಡೋಸ್ ನೀಡಿಕೆಯಲ್ಲಿ ಶೇ.100 ರಷ್ಟು ಸಾಧನೆಯಾಗಿದ್ದು, ಕೋವಿಡ್ ರೋಗ ನಿರೋಧಕ ಲಸಿಕಾಕರಣದಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ ಇಂದು ಹತ್ತನೇಯ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಜಿಲ್ಲೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಆರೋಗ್ಯ ಇಲಾಖೆಯು ಕೋವಿಡ್ ರೋಗನಿರೋಧಕ ಲಸಿಕಾಕರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಇಲ್ಲಿವರೆಗೆ ಜಿಲ್ಲೆಯ 120 ಗ್ರಾಮಗಳಲ್ಲಿನ ಅರ್ಹ ಪಲಾನುಭವಿಗಳಿಗೆ ಶೇ.100 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.96.20 ರಷ್ಟು ಗುರಿ ಸಾಧಿಸಿ, ಇಂದು ಹತ್ತನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ದಾನಿಗಳ ನೆರವಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಳೆದ ವಾರ 56 ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಘಟಕ ನೀಡಿದ್ದ ಆಹಾರ ಕಿಟ್ ಹಾಗೂ ಆರೋಗ್ಯ ಸುರಕ್ಷತಾ ವಸ್ತುಗಳನ್ನು ನೀಡಿ, ಗೌರವಿಸಲಾಗಿತ್ತು. ಹುಬ್ಬಳ್ಳಿಯ ಚಿನ್ಮಯ ಸೇವಾ ಸಮಿತಿ ಟ್ರಸ್ಟ್ ಹಾಗೂ ಗುಜರಾತ ಸಮಾಜದ ಸಹಯೋಗದಲ್ಲಿ ಪೂರೈಸಿರುವ ಕುಕ್ಕರ್‌ಗಳನ್ನು 62 ಗ್ರಾಮಗಳಲ್ಲಿ ಶೇ.100 ರಷ್ಟು ಲಸಿಕಾಕರಣದ ಗುರಿ ಸಾಧಿಸಿರುವ 120 ಆಶಾ ಹಾಗೂ 80 ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿ, ಗೌರವಿಸಲಾಗಿದೆ. ಮತ್ತು ಮುಕ್ಕಲ, ಕೋಳಿವಾಡ, ಶಲವಡಿ ಮತ್ತು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಚಿಟಗುಪ್ಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸನ್ಮಾನಿಸಲಾಗಿದೆ. ಈ ಮೂಲಕ ಶೇ.100 ರ ಸಾಧನೆಗೆ ಸಮೀಪದಲ್ಲಿರುವ ಆಶಾ ಹಾಗೂ ಇತರರಿಗೆ ಪ್ರೇರಣೆ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Kshetra Samachara
13/12/2021 08:37 am