ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೋರಾಗಿಯೇ ಸದ್ದು ಮಾಡುತ್ತಿದೆ ಪ್ರತ್ಯೇಕ ಪಾಲಿಕೆ ಕೂಗು

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂಬ ಕೂಗು ಇದೀಗ ಮತ್ತೆ ಹೋರಾಟದ ಸ್ವರೂಪ ಪಡೆದುಕೊಂಡಿದೆ. ಹುಬ್ಬಳ್ಳಿ, ಧಾರವಾಡ ಎರಡೂ ಅವಳಿ ನಗರಗಳಾದರೂ ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಧಾರವಾಡ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬಿದ್ದಿದ್ದು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲೇಬೇಕು ಎಂಬ ಒತ್ತಾಯ ಈ ಹಿಂದೆಯೂ ಕೇಳಿ ಬಂದಿತ್ತು. ಅಲ್ಲದೇ ಈ ಸಂಬಂಧ ಹೋರಾಟಗಳೂ ನಡೆದಿದ್ದವು. ಇದೀಗ ಈ ವಿಷಯ ಮತ್ತೆ ಮುನ್ನೆಲೆಗೆ ಬಂದು ಹೋರಾಟ ಕೂಡ ಆರಂಭಗೊಂಡಿದೆ.

ಹೌದು! ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲೇಬೇಕು ಎಂದು ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಹುಟ್ಟಿಕೊಂಡಿದೆ. ಧಾರವಾಡ ಹಿರಿಯ ನಾಗರಿಕರು ಈ ಹೋರಾಟಕ್ಕೆ ಅಣಿಯಾಗಿದ್ದಾರೆ. ನಿನ್ನೆಯಿಂದ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಅಧಿಕೃತ ಅಧಿಸೂಚನೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಧಾರವಾಡ ಬೆಳೆಯುತ್ತಿರುವ ಮಹಾನಗರ. ಈ ಹಿಂದೆ ಕೇವಲ 3 ಲಕ್ಷ ಜನಸಂಖ್ಯೆ ಇದ್ದ ವೇಳೆಯಲ್ಲಿ ಧಾರವಾಡವನ್ನೂ ಒಳಗೊಂಡು ಹುಬ್ಬಳ್ಳಿ, ಧಾರವಾಡಕ್ಕೆ ಒಂದೇ ಪಾಲಿಕೆ ಮಾಡಲಾಗಿತ್ತು. ಆದರೆ, ಇದೀಗ ಹುಬ್ಬಳ್ಳಿ, ಧಾರವಾಡ ಅವಳಿನಗರಗಳು ಬೆಂಗಳೂರು ಮಾದರಿಯಲ್ಲಿ ಬೆಳೆಯುತ್ತಿವೆ. ಬೆಂಗಳೂರು ಬಿಟ್ಟರೆ ಹುಬ್ಬಳ್ಳಿ, ಧಾರವಾಡ ನಗರಗಳೇ ಬಹುದೊಡ್ಡ ನಗರಗಳಾಗಿವೆ. ಅನುದಾನ ಹಾಗೂ ಅಭಿವೃದ್ಧಿ ವಿಷಯದಲ್ಲಿ ಧಾರವಾಡಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಭಾಗದವರಾದ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡುವ ಅವಶ್ಯಕತೆ ಇದೆ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದರು.

ಧಾರವಾಡ ವಿದ್ಯಾಕಾಶಿ, ಸಾಹಿತಿಗಳ ನಗರ, ಶಿಕ್ಷಣವಂತರ ನಗರ ಎಂದೆಲ್ಲ ಕರೆಯಿಸಿಕೊಳ್ಳುತ್ತದೆ. ಆದರೆ, ಇಲ್ಲಿ ಅಭಿವೃದ್ಧಿ ಕೆಲಸಗಳು ಮಾತ್ರ ಶೂನ್ಯ. ದಿನೇ ದಿನೇ ಬಡಾವಣೆಗಳು ಹೆಚ್ಚಾಗುತ್ತಿವೆ. ಜನಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ಆಧಾರದ ಮೇಲೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅವಶ್ಯಕತೆ ಇದ್ದು, ಮುಖ್ಯಮಂತ್ರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಇದರ ಬಗ್ಗೆ ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/04/2022 03:00 pm

Cinque Terre

169.89 K

Cinque Terre

12

ಸಂಬಂಧಿತ ಸುದ್ದಿ