ಹುಬ್ಬಳ್ಳಿ: ಅದು ಮಾಜಿ ಮುಖ್ಯಮಂತ್ರಿ,ಕೇಂದ್ರ ಸಚಿವರ ತವರು ಜಿಲ್ಲೆ. ಆ ಜಿಲ್ಲೆಯಲ್ಲಿನ ಕಚೇರಿಗಳು ಒಂದೊಂದಾಗಿ ಸ್ಥಳಾಂತರಗೊಳ್ಳುತ್ತಲೇ ಇವೆ.
ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಕಚೇರಿಗಳ ಸ್ಥಳಾಂತರದ ವಿರುದ್ಧ ಧ್ವನಿ ಎತ್ತಬೇಕಾದ ಸಂಸದರು, ಸಚಿವರು ಎಲ್ಲವನ್ನೂ ನೋಡಿ, ನೋಡಿರಲಾರದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ-ಧಾರವಾಡ ಅವಳಿನಗರದ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಸರ್ಕಾರದಿಂದ ಮೇಲಿಂದ ಮೇಲೆ ಅನ್ಯಾಯ ಅಗುತ್ತಲೇ ಬಂದಿದೆ.
ಮೊನ್ನೆ ಮೊನ್ನೆಯಷ್ಟೇ ಧಾರವಾಡ ಜಿಲ್ಲೆಯಲ್ಲಿನ ನೀರಾವರಿ ನಿಗಮವನ್ನು ಹಾಸನಕ್ಕೆ ರಾಜ್ಯ ಸರ್ಕಾರ ಸ್ಥಳಾಂತರ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಹುಬ್ಬಳ್ಳಿಯಲ್ಲಿರೋ ಪೋಸ್ಟಲ್ ಸ್ಟೋರ್ ಡಿಪೋ ಸ್ಥಳಾಂತರಕ್ಕೆ ಆದೇಶ ನೀಡಿದೆ.
ಎಂಟು ತಿಂಗಳ ಹಿಂದಷ್ಟೇ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿದ್ದ ಏಕೈಕ ಗೆಜೆಟೆಡ್ ಸಿನೀಯರ್ ಪೋಸ್ಟ್ ಮಾಸ್ಟರ್ ಹುದ್ದೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದ ಕೇಂದ್ರ ಸರ್ಕಾರ, ಇದೀಗ ಇಲ್ಲಿಯೇ ಇದ್ದ ಪೋಸ್ಟಲ್ ಸ್ಟೋರ್ ಡಿಪೋವನ್ನು ಸಹ ಬೆಂಗಳೂರಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದೆ.
ದೆಹಲಿಯ ಮಾಹಿತಿ ಸಚಿವಾಲಯದ ಅಂಚೆ ಇಲಾಖೆ ಆಗಸ್ಟ್ 25 ರಂದು ಆದೇಶ ಹೊರಡಿಸಿ, ಸೆಪ್ಟೆಂಬರ್ 30ರ ಒಳಗೆ ಸ್ಥಳಾಂತರವಾಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕೇಂದ್ರ ಸರ್ಕಾರದ ಈ ನಡೆ ಸಾರ್ವಜನಿಕರ ಹಾಗೂ ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಭಾಗದ ಬೀದರ, ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಉತ್ತರ ಕನ್ನಡ ಸೇರಿದಂತೆ 14 ಜಿಲ್ಲೆಗಳಿಗೆ ಹುಬ್ಬಳ್ಳಿಯಲ್ಲಿರುವ ಈ ಏಕೈಕ ಪೋಸ್ಟಲ್ ಸ್ಟೋರ್ ಡಿಪೋನಿಂದಲೇ ಸಾಮಗ್ರಿಗಳು ಪೂರೈಕೆಯಾಗುತ್ತವೆ.
ಅಂಚೆ ಇಲಾಖೆಗೆ ಸಂಬಂಧಿಸಿದ ಫಾರ್ಮ್, ಪಾಸ್'ಬುಕ್, ಅಂಚೆ ಚೀಟಿ, ಪೋಸ್ಟ್ ಕಾರ್ಡ್, ಸ್ಟಿಕ್ಕರ್, ಪೇಪರ್ಸ್ ಸೇರಿದಂತೆ ಪ್ರತಿಯೊಂದು ಸಹ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತದೆ.
ಹುಬ್ಬಳ್ಳಿ ವ್ಯಾಪ್ತಿಯಲ್ಲಿ 14 ಜಿಲ್ಲೆಗಳ 4,445 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಪ್ರತಿ ತಿಂಗಳು ಇಲ್ಲಿಂದ 50 ಸಾವಿರದಷ್ಟು ಫಾರ್ಮ್‌ಗಳು ಪೂರೈಕೆಯಾಗುತ್ತವೆ.
ಗ್ರಾಮೀಣ ಭಾಗದಲ್ಲಿರುವ ಅಂಚೆ ಕಚೇರಿಗಳು ಅಗತ್ಯವಿರುವ ಸಾಮಗ್ರಿಗಳ ಬೇಡಿಕೆಯಿಟ್ಟರೆ, ಇಲ್ಲಿಂದ ನಾಲ್ಕೈದು ದಿನಗಳ ಒಳಗೆ ಪೂರೈಕೆ ಮಾಡಲಾಗುತ್ತದೆ.
ಇದೀಗ ಈ ಕಚೇರಿ ಸ್ಥಳಾಂತರವಾಗುತ್ತಿರುವುದರಿಂದ ಈ ಭಾಗದ ಅಂಚೆ ಕಚೇರಿಗಳಿಗೆ ನಿಗದಿತ ಸಮಯಕ್ಕೆ ಸಾಮಗ್ರಿಗಳು ದೊರೆಯುವುದು ಕಷ್ಟವಾಗುತ್ತದೆ. ಅಲ್ಲದೇ ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಗತಿ ಏನು ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.
Kshetra Samachara
23/09/2020 06:55 pm