ಪಬ್ಲಿಕ್ ನೆಕ್ಸ್ಟ್ ವರದಿ:
ಈರಣ್ಣ ವಾಲಿಕಾರ
ಹುಬ್ಬಳ್ಳಿ: ಗದಗ ರಸ್ತೆಯಿಂದ ಗಬ್ಬೂರು ಹಾಗೂ ಕಾರವಾರ ರಸ್ತೆಯ ಅಂಚಟಗೇರಿ ಮಧ್ಯೆ ಸಂಪರ್ಕ ಕಲ್ಪಿಸಲು 200 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈ ರಸ್ತೆ ನಿರ್ಮಾಣದ ವೇಳೆ ರೈತರಿಂದ ರಸ್ತೆಗಾಗಿ ಜಮೀನು ಪಡೆದಿರುವ ಅಧಿಕಾರಿಗಳು ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಮೊದಲಿಗೆ 30 ಗುಂಟೆ ಜಮೀನು ಭೂಸ್ವಾಧೀನ ಮಾಡಕೊಳ್ಳಲಾಗಿದ್ದು, ಇದೀಗ ಒಂದೂವರೆ ಎಕರೆದಷ್ಟು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜಮೀನು ಒತ್ತುವರಿ ಮಾಡಿಕೊಂಡಿದ್ದರ ಪರಿಹಾರವನ್ನು ರೈತರು ಕೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ 2013ರಲ್ಲಿ 13 ಕೀ.ಮಿ. ನಷ್ಟು ರಿಂಗ್ ರೋಡ್ ಕಾಮಗಾರಿಗಾಗಿ ಯೋಜನೆ ರೂಪಿಸಲಾಗಿತ್ತು. ಅದರಲ್ಲೂ ಗದಗ ರಸ್ತೆಯಿಂದ ಗಬ್ಬೂರು ಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣವನ್ನ 2017ರಲ್ಲಿ ಆರಂಭಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲದೇ ಈಗಾಗಲೇ ವಾಹನಗಳ ರಸ್ತೆ ಮೂಲಕ ಸಂಚಾರವನ್ನ ಆರಂಭಿಸಿವೆ. ಹೀಗಾಗಿ ರಸ್ತೆ ಕಾಮಗಾರಿ ಮುಗಿಯಲು ಬಂದರೂ ಕೂಡ ಪರಿಹಾರ ನೀಡುತ್ತಿಲ್ಲ ಅನ್ನೋ ಗೋಳು ರೈತರದ್ದಾಗಿದೆ. ಅಲ್ಲದೇ ರಿಂಗ್ ರೋಡ್ನಲ್ಲಿ ಬರುವ ಮೂರು ರಸ್ತೆಗಳಿಗೆ ಮೇಲ್ಸೇತುವೆ ಮಾಡಿಲ್ಲ. ಹಳ್ಳಿಗಳಿಗೆ ಹಾಗೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕಿತ್ತು. ಅದನ್ನ ಮಾಡದೇ ರಸ್ತೆ ಮಾಡಿದ್ದು, ದಿನನಿತ್ಯ ಜಮೀನುಗಳಿಗೆ ನಮಗೆ ಹೋಗಲು ದಾರಿ ಇಲ್ಲದೇ ಪರದಾಡುವಂತಾಗಿದೆ ಅಂತಾರೆ ರೈತರು.
ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿರುವ ರಸ್ತೆ ನಿರ್ಮಾಣದ ವೇಳೆ, ರೈತರ ಜಮೀನು ಹೆಚ್ಚಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇತ್ತ ರೈತರ ಜಮೀನುಗಳಿಗೆ ಹೋಗಲು ರಸ್ತೆಯನ್ನು ಕೂಡ ನಿರ್ಮಾಣ ಮಾಡಿಲ್ಲ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ರಸ್ತೆ ತಡೆದು ರೈತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತಕ್ಕೆ ಹತ್ತು ದಿನಗಳ ಗಡುವು ನೀಡಿದ್ದಾರೆ. ಸಮಸ್ಯೆ ಪರಿಹಾರ ನೀಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ರೈತರು ನೀಡಿದ್ದು, ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳುತ್ತದೆಯಾ? ಕಾದು ನೋಡಬೇಕಿದೆ....!
Kshetra Samachara
04/02/2021 05:12 pm