ಅದು ನಿಜಕ್ಕೂ ಸಾವಿನ ಹೆದ್ದಾರಿ. ಈ ಹೆದ್ದಾರಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ದಾವಣಗೆರೆ ಮೂಲದ 11 ಜನ ಸ್ನೇಹಿತೆಯರನ್ನು ಬಲಿ ಪಡೆದಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಮತ್ತೊಂದು ರಕ್ತದ ಕಥೆಗೆ ಕಾರಣವಾಗಿದೆ.
ಹೌದು.. ಧಾರವಾಡ ರಸ್ತೆ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದ್ದು, ಲಾರಿ-ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 09 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ ನಡೆದಿದೆ.
ಮುಂಬೈಯಿಂದ ಬೆಂಗಳೂರಿಗೆ ತೆರುಳಿತಿದ್ದ ಖಾಸಗಿ ಬಸ್ ನಲ್ಲಿದ್ದ 09 ಜನರ ದುರ್ಮರಣವಾಗಿದ್ದು, ಗಾಯಗೊಂಡರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್, ಧಾರವಾಡದ ಕಡೆ ಹೊರಟಿದ್ದ ಲಾರಿ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಈ ಸಾವಿನ ಹೆದ್ದಾರಿಯಲ್ಲಿ ವರ್ಷಕ್ಕೊಮ್ಮೆ ಇಂತಹ ಘೋರ ಅಪಘಾತ ಸಂಭವಿಸುತ್ತಲೇ ಇದೆ. ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 1,200 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಹುಬ್ಬಳ್ಳಿ- ಧಾರವಾಡ ಬಳಿ ಪುಣೆ-ಬೆಂಗಳೂರು ಸಂರ್ಪಕ ಕಲ್ಪಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅವಳಿ ನಗರದ ಮಧ್ಯೆ ಕೇವಲ ದ್ವಿಪಥವಿತ್ತು. ಸದ್ಯ 31 km ಷಟ್ಪಥ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ.
ಇತ್ತೀಚಿಗೆ ಕಿರಿದಾದ ರಸ್ತೆಯಿಂದ ಭೀಕರ ಆ್ಯಕ್ಸಿಡೆಂಟ್ ಗಳು ಹೆಚ್ಚುತ್ತಲೇ ಇದ್ದು ಕಳೆದ ವರ್ಷ ಜನವರಿಯಲ್ಲಿ ನಡೆದ ಅಪಘಾತದಲ್ಲಿ ಮಡಿದ ಸ್ನೇಹಿತೆಯರ ಸಾವಿಗೆ ಪ್ರಧಾನಿ ಮೋದಿ ಕೂಡಾ ಕಂಬನಿ ಮಿಡಿದಿದ್ದರು. ಹೀಗಾಗಿ ಇದು ಸಾವಿನ ಹೆದ್ದಾರಿ ಅಂತಲೇ ಕುಖ್ಯಾತಿ ಪಡೆದಿದೆ.
ಒಟ್ಟಿನಲ್ಲಿ ಸಾವಿನ ಹೆದ್ದಾರಿ ಎಂಬ ಕುಖ್ಯಾತಿಯ ಹಣೆಪಟ್ಟಿ ಕಳೆಚಲು ಸರ್ಕಾರ ನಿರ್ಧಾರ ಮಾಡಿದೆ ಆದರೆ ಕಾಮಗಾರಿ ವಿಳಂಬಧೋರಣೆಯಿಂದ ಇನ್ನೂ ಕೂಡ ಯಾವುದೇ ಕೆಲಸ ಆರಂಭವಾಗಿಲ್ಲ. ಗುದ್ದಲಿ ಪೂಜೆ ಮುಗಿದು ಸುಮಾರು ದಿನ ಕಳೆದರೂ ಕೆಲಸ ಆರಂಭಗೊಂಡಿಲ್ಲ. ಈ ಸಾವಿನ ಹೆದ್ದಾರಿ ಇನ್ನು ಎಷ್ಟು ಬಲಿ ಪಡೆದ ಮೇಲೆ ಕಾಮಗಾರಿ ಆರಂಭಗೊಳ್ಳುವುದೊ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/05/2022 11:56 am