ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಇದು ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡದಾದ ಸರ್ಕಾರಿ ITI ಕಾಲೇಜು. ಆದರೆ ಇಲ್ಲಿ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕತ್ತಲಿನಲ್ಲೇ ಪಾಠ ಕಲಿಯುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಅಷ್ಟಕ್ಕೂ ಅದು ಯಾವ ಸರ್ಕಾರಿ ಐಟಿಐ ಕಾಲೇಜು ಅಂತಿರಾ ಈ ಸ್ಟೋರಿ ನೋಡಿ.
ಹೌದು. ಒಂದೆಡೆ ಶಿಥಿಲಾವಸ್ಥೆ ತಲುಪಿರುವ ಕಟ್ಟಡ, ಆ ಕಟ್ಟಡದೊಳಗೆ ಆತಂಕದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು. ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದುಸ್ಥಿತಿ ಇದು. ಅಂದ ಹಾಗೇ 1957ರಲ್ಲಿ ಪ್ರಾರಂಭವಾದ ಈ ಕಾಲೇಜು, ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ತಾಂತ್ರಿಕ ಶಿಕ್ಷಣ ನೀಡುತ್ತಾ ಬಂದಿದೆ. ಆದರೆ ಕಾಲಾನುಕ್ರಮದಲ್ಲಿ ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದೆ. ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಕಾರ್ಯಗಾರದ ಕೆಲವೆಡೆ ಮೇಲ್ಛಾವಣಿ ಹಾರಿ ಹೋಗಿದೆ. ಕಿಟಕಿ ಗಾಜುಗಳು ಒಡೆದು ಮಳೆ ಬಂದಾಗ ಮಳೆ ನೀರು ಕಾರ್ಯಾಗಾರಕ್ಕೆ ನುಗ್ಗುತ್ತಿವೆ. ಪರಿಣಾಮವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ತರಬೇತಿ ಮಾಡುತ್ತಿದ್ದಾಗ ಯಂತ್ರಗಳು ಕೈಕೊಡುತ್ತಿವೆಯಂತೆ.
ಒಟ್ಟು 1200ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಇವರಿಗೆ ಸರಿಯಾದ ಸುಸಜ್ಜಿತ ಕಟ್ಟಡಗಳಿಲ್ಲದೇ ಹಳೆಯ 12 ಕೊಠಡಿಗಳಲ್ಲಿ ಪಾಠಗಳನ್ನು ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕಾಲೇಜಿನಲ್ಲಿ ಸುಸಜ್ಜಿತ ಸಭಾಂಗಣ, ಉಪನ್ಯಾಸಕರ ವಿಶ್ರಾಂತಿ ಕೊಠಡಿ, ಮೈದಾನ, ಕುಡಿಯುವ ನೀರು ಸೇರಿದಂತೆ ಇನ್ನಿತರ ನೂನ್ಯತೆಗಳನ್ನು ಎದುರಿಸುತ್ತಿದೆ. ಕಾಲೇಜು ಸರಿಯಾದ ಮುಖ್ಯರಸ್ತೆಯೂ ಇಲ್ಲದಾಗಿದೆ. ಪರಿಣಾಮವಾಗಿ ಸಮಸ್ಯೆಗಳ ಸುರಿಮಳೆಯಲ್ಲಿದ್ದು, ಕೂಡಲೇ ಕಾಲೇಜಿಗೆ ಕಾಯಕಲ್ಪದ ಅನಿವಾರ್ಯತೆ ಎದುರಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸರ್ಕಾರಕ್ಕೆ ತಿಳಿಸಿದೆ.
ಒಟ್ಟಿನಲ್ಲಿ ಸರ್ಕಾರ ಈ ಐಟಿಐ ಕಾಲೇಜಿನತ್ತ ಗಮನ ಹರಿಸಿ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಬೇಕಾಗಿದೆ....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/06/2022 04:08 pm