ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಹಾವು ಹಿಡಿಯುವವರನ್ನು ನಾವು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಆದರೆ, ಧಾರವಾಡದಲ್ಲೊಬ್ಬ ಯುವಕ ಹಾವುಗಳನ್ನು ಹಿಡಿಯುವುದಷ್ಟೇ ಅಲ್ಲ. ಗಾಯಗೊಂಡು ಬಿದ್ದ ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ಅವುಗಳ ಆರೈಕೆ ಮಾಡುತ್ತಿದ್ದಾರೆ.
ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ಯುವಕನ ಹೆಸರು ಸೌರಭ ಕಮ್ಮಾರ. ಇದುವರೆಗೂ ನೂರಾರು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಗಾಯಗೊಂಡು ಬಿದ್ದ ಅನೇಕ ನಾಯಿಗಳನ್ನು ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ಕೊಡಿಸಿ ತಮ್ಮ ಹೊಲದಲ್ಲೇ ಇಟ್ಟುಕೊಂಡು ಅವುಗಳನ್ನು ಜೋಪಾನ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಶೇಷ ಎಂದರೆ ಮೇಲಿಂದ ಬಿದ್ದು ಗಾಯಗೊಂಡಿದ್ದ ಹದ್ದನ್ನು ತಂದಿಟ್ಟುಕೊಂಡಿರುವ ಸೌರಭ, ಆ ಹದ್ದಿನ ರೆಕ್ಕೆಗೆ ರಾಡ್ ಹಾಕಿಸಿ ಅದು ಮತ್ತೆ ಹಾರಾಡುವಂತೆ ಮಾಡಿದ್ದಾರೆ. ಸದ್ಯ ತಮ್ಮ ಮನೆಯಲ್ಲೇ ಇಟ್ಟುಕೊಂಡು ಹದ್ದನ್ನು ಉಪಚಾರ ಮಾಡುತ್ತಿರುವ ಇವರು, ಅದಕ್ಕೆ ಬೇಕಾದ ಊಟವನ್ನೂ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಬಿದ್ದು ಗಾಯಗೊಂಡ ಮನುಷ್ಯನಿಗೆ ರಾಡ್ ಹಾಕಿಸುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ, ಸೌರಭ ಅವರು ಹದ್ದಿನ ರೆಕ್ಕೆಗೆ ರಾಡ್ ಹಾಕಿಸಿ ಅದು ಮತ್ತೆ ಹಾರಾಡುವಂತೆ ಮಾಡಿರುವುದು ವಿಶೇಷ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ವಿದ್ಯುತ್ ಶಾಕ್ ತಗುಲಿ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಮತ್ತೊಂದು ಹದ್ದನ್ನು ತಂದಿಟ್ಟುಕೊಂಡಿರುವ ಇವರು, ಅದಕ್ಕೂ ಸೂಕ್ತ ಚಿಕಿತ್ಸೆ ಕೊಡಿಸಿ, ಅವು ಗುಣಮುಖವಾದ ನಂತರ ಹಾರಿ ಬಿಡುವುದಾಗಿ ಹೇಳುತ್ತಾರೆ. ಈ ಪ್ರಾಣಿ ರಕ್ಷಣೆ ಮಾಡುವ ರೂಢಿ ಹೇಗೆ ಬಂತು ಎಂಬುದರ ಬಗ್ಗೆ ಸೌರಭ ಅವರೇ ಹೇಳುತ್ತಾರೆ ಕೇಳಿ.
ನಾಯಿ, ಹಸು, ಕುದುರೆ, ಕೋತಿ, ಪಕ್ಷಿ ಏನೇ ಇರಲಿ ಯಾವುದಾದರೊಂದು ಗಾಯಗೊಂಡ ಪ್ರಾಣಿ ಕಣ್ಣಿಗೆ ಬಿದ್ದರೆ ಸಾಕು ಸೌರಭ ಅದನ್ನು ನೇರವಾಗಿ ಮನೆಗೆ ತಂದು ಆರೈಕೆ ಮಾಡುತ್ತಾರೆ. ಸೌರಭ ಅವರ ಪ್ರಾಣಿ ಪ್ರೀತಿಗೆ ಮನಸೋತಿರುವ ಕೃಷಿ ವಿಶ್ವವಿದ್ಯಾಲಯದ ವೈದ್ಯಾಧಿಕಾರಿಗಳು ಕೂಡ ಸೌರಭ ಅವರು ತರುವ ಪ್ರಾಣಿಗಳಿಗೆ ಖುಷಿಯಿಂದಲೇ ಚಿಕಿತ್ಸೆ ಕೊಡುತ್ತಾರೆ. ಇವರ ತಂದೆ, ತಾಯಿ ಕೂಡ ಮಗನ ಈ ಪ್ರಾಣಿ ಸೇವೆಗೆ ಸಹಕಾರ ಕೊಡುತ್ತಿದ್ದಾರೆ.
ಮೂರು ವರ್ಷಗಳಿಂದ ಈ ರೀತಿ ಪ್ರಾಣಿಗಳ ಸೇವೆ ಮಾಡುತ್ತಿರುವ ಸೌರಭ ಅವರು, ಸುಮಾರು 500 ರಿಂದ 600 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಅದನ್ನು ರಕ್ಷಣೆ ಮಾಡುತ್ತಾರೆ. ತಾವು ಹೆಚ್ಚು ಇಷ್ಟಪಟ್ಟು ಜೋಪಾನ ಮಾಡಿದ ಪ್ರಾಣಿಗಳ ಚಿತ್ರವನ್ನು ತಮ್ಮ ಕೈಮೇಲೆ ಸೌರಭ ಅವರು ಟ್ಯಾಟು ರೂಪದಲ್ಲಿ ಹಾಕಿಸಿಕೊಂಡಿದ್ದಾರೆ. ತಮ್ಮದೇ ಸ್ವಂತ ಬ್ಯುಸಿನೆಸ್ ಹಾಗೂ ಕೃಷಿ ಜಮೀನು ಹೊಂದಿರುವ ಸೌರಭ ಅವರು, ತಮ್ಮ ಕಾಯಕದ ಜೊತೆಗೆ ಪ್ರಾಣಿಗಳ ರಕ್ಷಣೆ ಕಾರ್ಯವನ್ನೂ ಮಾಡುತ್ತಿದ್ದು, ಇವರ ಈ ಪ್ರಾಣಿಸೇವೆ ಹೀಗೇ ಮುಂದುವರೆಯುವಂತಾಗಲಿ.
Kshetra Samachara
25/10/2021 08:52 pm