ಧಾರವಾಡ: ದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದನ್ನು ತಪ್ಪಿಸುವುದಕ್ಕೋಸ್ಕರ ಸರ್ಕಾರಗಳು ಕೂಡ ವಿವಿಧ ರೀತಿಯಲ್ಲಿ ಕಸರತ್ತು ನಡೆಸುತ್ತಲೇ ಇದ್ದರೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ. ದೆಹಲಿ ನಿರ್ಭಯಾ ಪ್ರಕರಣದಂತೆ ಹುಬ್ಬಳ್ಳಿ, ಧಾರವಾಡದಲ್ಲೂ ಅಂತಹ ಪ್ರಕರಣಗಳು ನಡೆಯಬಾರದು ಎಂಬ ಉದ್ದೇಶದಿಂದ ಆಟೊ ರಕ್ಷಾ ಫೌಂಡೇಶನ್ ಎಂಬ ಸಂಸ್ಥೆಯೊಂದು ಹುಟ್ಟಿಕೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಿದೆ.
ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ರಾತ್ರಿ 10 ಗಂಟೆಯ ನಂತರ ಅಗತ್ಯ ಇರುವ ಮಹಿಳೆಯರಿಗೆ ಈ ಫೌಂಡೇಶನ್ ವತಿಯಿಂದ ಉಚಿತವಾಗಿ ಆಟೊ ಸೇವೆ ನೀಡಲಾಗುತ್ತಿದೆ. ಮಹಿಳೆಯರು ಒಂಟಿಯಾಗಿ ರಾತ್ರಿ ವೇಳೆ ಹೊರಗಡೆ ಹೋದರೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯಬಹುದು ಹೀಗಾಗಿ ಅವಶ್ಯಕತೆ ಇರುವ ಹೆಣ್ಣು ಮಕ್ಕಳು ರಾತ್ರಿ 10ರ ನಂತರ ಈ ಆಟೊಕ್ಕೆ ಕರೆ ಮಾಡಿದರೆ ಅಂತವರಿಗೆ ಉಚಿತವಾಗಿ ಸೇವೆ ನೀಡಲು ಮುಂದಾಗಿದೆ. ಇಂತಹ ವಿನೂತನ ಕಾರ್ಯಕ್ಕೆ ಧಾರವಾಡದ ಪ್ರತಿಷ್ಟಿತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಎಂ.ಎ.ಮರಿಗೌಡರ, ಕವಿವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಸಂಗೀತಾ ಮಾನೆ ಅವರು ಚಾಲನೆ ನೀಡಿದರು. ಇನ್ನು ಈ ಆಟೊ ಯಾವ ರೀತಿ ಕಾರ್ಯ ಮಾಡುತ್ತದೆ ಎಂಬುದರ ಬಗ್ಗೆ ಫೌಂಡೇಶನ್ ಅಧ್ಯಕ್ಷ ಸುನೀಲ್ ಅವರೇ ಹೇಳುತ್ತಾರೆ ಕೇಳಿ.
ರಾತ್ರಿ ವೇಳೆ ತುರ್ತು ಅಗತ್ಯ ಇರುವ ಮಹಿಳೆಯರು ದೂರವಾಣಿ ಸಂಖ್ಯೆ 7338252131 ಕ್ಕೆ ಕರೆ ಮಾಡಿ ಉಚಿತ ಸೇವೆ ಪಡೆಯಬಹುದಾಗಿದೆ. ಒಂಬತ್ತು ಜನ ಸೇರಿಕೊಂಡು ಮಹಿಳೆಯರ ರಕ್ಷಣೆಗಾಗಿ ಈ ರೀತಿಯ ವಿನೂತನ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಆಟೊಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ, ಮಹಿಳೆಯರ ಮೇಲೆ ಪುಂಡರ ಗುಂಪು ದಾಳಿ ಮಾಡಿದಾಗ ಅವರಿಂದ ರಕ್ಷಣೆ ಮಾಡಿಕೊಳ್ಳವುದು ಹೇಗೆ ಎಂಬುದರ ಬಗ್ಗೆಯೂ ಅಣಕು ಪ್ರದರ್ಶನ ಕೂಡ ಮಾಡಲಾಯಿತು.
Kshetra Samachara
15/09/2021 04:16 pm