ಧಾರವಾಡ: ದೇಶದ ಗಡಿ ಕಾಯಲು ಹೋಗಿದ್ದ ಆ ವೀರ ಇಂದಲ್ಲಾ ನಾಳೆ ಮನೆಗೆ ಬಂದೇ ಬರ್ತಾನೆ ಅಂತಾ ಆ ಇಡೀ ಕುಟುಂಬ ಕಾಯುತ್ತಿದೆ. 15 ವರ್ಷವಾದರೂ ಮಗ ಮನೆಗೆ ಬರದೇ ಇದ್ದಾಗ ಕಡೆಗೆ ಆ ಯೋಧನ ಗೆಳೆಯರು ಯೋಧನ ಪುತ್ಥಳಿ ಮಾಡಿಸಿ ಊರಿಗೆ ಸಮರ್ಪಿಸಿದ್ದಾರೆ. ಅಷ್ಟಕ್ಕೂ ಏನಿದು ಸುದ್ದಿ ಅಂತೀರಾ ಈ ವರದಿ ನೋಡಿ.
ಮಂಜುನಾಥ ಶಿವಳ್ಳಿ, ಧಾರವಾಡ ಬಳಿಯ ನವಲೂರಿನ ಹೆಮ್ಮೆಯ ಪುತ್ರ. 20 ವರ್ಷದ ಹರೆಯದ ಯುವಕ. ದೇಶ ಸೇವೆ ಮಾಡಬೇಕೆಂದು 2000ನೇ ಇಸ್ವಿಯಲ್ಲಿ ಸೈನ್ಯಕ್ಕೆ ಭರ್ತಿಯಾಗಿದ್ದ. ಅದು 2005 ರ ಸೆಪ್ಟಂಬರ್ 15, ಸೈನಿಕನಾಗಿದ್ದ ಮಂಜುನಾಥ ಶಿವಳ್ಳಿ ದೇಶದ ಗಡಿ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೆಂದು ಹೋಗಿದ್ದಾಗ ಉಗ್ರರು ಸಿಡಿಸಿದ ಬಾಂಬ್ ನಿಂದಾಗಿ ಮಂಜುನಾಥ ಸೇರಿದಂತೆ 36 ಜನ ಯೋಧರು ಸಾವನ್ನಪ್ಪಿದ್ದರು. 36 ಜನರ ಪೈಕಿ ಮಂಜುನಾಥನ ದೇಹ ಛಿದ್ರ ಛಿದ್ರವಾದ ಪರಿಣಾಮ ಆತನ ಮೃತ ದೇಹ ಕೂಡ ಊರಿಗೆ ಬರಲಿಲ್ಲ.
ಯಾವಾಗ ಯೋಧನ ಶರೀರ ಮನೆಗೆ ಬರಲಿಲ್ಲವೋ ಆಗ ತಮ್ಮ ಮನೆಯ ಮಗ ಇನ್ನೂ ಮರಣ ಹೊಂದಿಲ್ಲ ಎಂಬ ನಂಬಿಕೆಯಲ್ಲೇ ಇಡೀ ಕುಟುಂಬವಿದೆ. ಈ ನಂಬಿಕೆ ಗ್ರಾಮಸ್ಥರದ್ದೂ ಕೂಡ ಆಗಿತ್ತು. ಆದ್ರೆ, 15 ವರ್ಷವಾದರೂ ವೀರಯೋಧ ಊರಿಗೆ ಬರದೇ ಇದ್ದದ್ದರಿಂದ ಆತನ ಸ್ನೇಹಿತರೇ ಯೋಧನ ಕಂಚಿನ ಪುತ್ಥಳಿ ಮಾಡಿಸಿ ಊರಿಗೆ ಸಮರ್ಪಿಸಿದ್ದಾರೆ.
ಅಪಾರ ಗೆಳೆಯರನ್ನು ಸಂಪಾದಿಸಿದ್ದ ಹುತಾತ್ಮ ಯೋಧ ಮಂಜುನಾಥ, ಊರಿಗೆ ಬಂದಾಗಲೆಲ್ಲಾ ಗೆಳೆಯರನ್ನು ಭೇಟಿ ಮಾಡಿ ತಾನು ಕಲಿತ ಶಾಲೆಗೆ ಭೇಟಿ ಕೊಡುತ್ತಿದ್ದ.
ಮಂಜುನಾಥನ ನೆನಪಿಗಾಗಿ ಆತನ ಸ್ನೇಹಿತರೇ ಕಂಚಿನ ಪುತ್ಥಳಿಯನ್ನು ಮೆರವಣಿಗೆ ಮಾಡಿ ಊರಿನಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಒಟ್ಟಿನಲ್ಲಿ ಅಗಲಿದ ಯೋಧನಿಗಾಗಿ ಮನ ಮಿಡಿದ ಆತನ ಸ್ನೇಹಿತರು, ಹುತಾತ್ಮ ಯೋಧನ ಹೆಸರು ಸದಾ ನೆನಪಿನಲ್ಲಿರಲಿ ಎಂಬ ಉದ್ದೇಶದಿಂದ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ.
Kshetra Samachara
29/01/2021 10:15 am