ಹುಬ್ಬಳ್ಳಿ: ಈಗಿನ ಕಾಲದಲ್ಲಿ ದುಡ್ಡೇ ದೊಡ್ಡಪ್ಪ... ದುಡ್ಡಿದ್ದರೆ ದುನಿಯಾ. ಹೀಗಿರುವಾಗ ಸಂಬಳ ಪಡೆಯದೆ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕಿಯರು ಪ್ರತಿಫಲ ಬಯಸದೆ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ! ಬಡಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ಹಳೆ ಹುಬ್ಬಳ್ಳಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ, ನಂ.1ರ ಪೂರ್ವ ಪ್ರಾಥಮಿಕ ತರಗತಿಯಲ್ಲಿ ಶಿಕ್ಷಕಿಯರಾದ ಭಾಗ್ಯಶ್ರೀ ಶಿರೋಳ್ಕರ್ ಹಾಗೂ ಫಾತಿಮಾ ಮಾಸನಕಟ್ಟಿ ಅವರು ಸಂಬಳ ಪಡೆಯದೆ ಶಾಲೆಯಲ್ಲಿ ಸೇವೆ ನೀಡುವುದರ ಜತೆಗೆ ಅಕ್ಷರ ಮಾತೆಯರಾಗಿ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ.
2020-21ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಯಿತು. ಆ ವೇಳೆ ಎಸ್‌ಡಿಎಂಸಿಗೆ ಶಿಕ್ಷಕರ ನೇಮಕ, ಅವರಿಗೆ ಸಂಬಳ ನೀಡುವುದು ಹೊರೆಯಾಗಿತ್ತು. ಅರ್ಜಿ ಸಲ್ಲಿಸಿದವರಲ್ಲಿ ಯಾರು ಉಚಿತವಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎಂಬುದನ್ನು ಪರಿಗಣಿಸಿ ಎನ್‌ಟಿಸಿ ಶಿಕ್ಷಣ ಪಡೆದ ಭಾಗ್ಯಶ್ರೀ ಶಿರೋಳ್ಕರ್ ಅವರನ್ನು ನೇಮಿಸಲಾಯಿತು.
ಕೆಲವು ದಿನಗಳ ಬಳಿಕ ಎಲ್‌ಕೆಜಿ- ಯುಕೆಜಿ ಎರಡು ತರಗತಿಗಳನ್ನು ಒಬ್ಬರೇ ನಿಭಾಯಿಸುವುದು ಕಷ್ಟವಾಯಿತು. ಹಾಗಾಗಿ ಎನ್‌ಟಿಸಿ ಶಿಕ್ಷಣ ಪಡೆದ ಮತ್ತೋರ್ವ ಶಿಕ್ಷಕಿಯನ್ನಾಗಿ ಫಾತಿಮಾ ಮಾಸನಕಟ್ಟಿ ಅವರನ್ನು ನೇಮಿಸಲಾಯಿತು. ಇಬ್ಬರು ಶಿಕ್ಷಕಿಯರು ಆರ್ಥಿಕವಾಗಿ ಸದೃಢವಾಗಿರದ ಕುಟುಂಬದಿಂದ ಬಂದಿದ್ದರೂ ತಾವು ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸಲು ಸಿದ್ಧ ಎಂದು ಮುಂದೆ ಬಂದರು. ಅದರಂತೆ ಭಾಗ್ಯಶ್ರೀ 2 ವರ್ಷ, ಫಾತಿಮಾ ಒಂದು ವರ್ಷ 4 ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿದ್ದಾರೆ.
ಇನ್ನು, ಮಕ್ಕಳಿಗೆ ಬೇಕಾದ ಶೈಕ್ಷಣಿಕ ನೆರವನ್ನು ಕಲ್ಪಿಸಲು ಶಿಕ್ಷಕಿಯರು ಮುಂದಾಗಿದ್ದಾರೆ. ಬಡಮಕ್ಕಳಿಗೆ ಬ್ಯಾಗ್ ವಿತರಣೆ ಇತ್ಯಾದಿ ಕಾರ್ಯದ ಮೂಲಕ ಮಕ್ಕಳಷ್ಟೇ ಅಲ್ಲದೆ ಪಾಲಕರ ಮನವನ್ನೂ ಈ ಶಿಕ್ಷಕಿಯರು ಗೆದ್ದಿದ್ದಾರೆ. ಈ ಶಾಲೆಯ ಯುಕೆಜಿಯಲ್ಲಿ 60, ಎಲ್‌ಕೆಜಿಯಲ್ಲಿ 64 ಮಕ್ಕಳು ಕಲಿಯುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ವೆಚ್ಚವನ್ನು ಪಾಲಕರು ಅಥವಾ ಆಡಳಿತ ಮಂಡಳಿಯೇ ಭರಿಸಬೇಕಾಗಿದೆ. ಹಾಗಾಗಿ ಇವರ ಸೇವೆಯಿಂದ ಶಾಲೆಗೆ ಆರ್ಥಿಕ ಸಂಕಷ್ಟವೂ ತಪ್ಪಿದೆ. ಆದರೆ, ಇವರ ನಿರಂತರ ಸೇವೆ ಮೆಚ್ಚಿದ ಶಾಲಾಡಳಿತ ಇವರಿಗೆ ಗೌರವಧನ ನೀಡಲೇಬೇಕೆಂದು ಇತ್ತೀಚೆಗೆ ತೀರ್ಮಾನಿಸಿರುವುದು ಸ್ವಾಗತಾರ್ಹ.
ಜಗತ್ತಿನ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಿಂದ ಸ್ಫೂರ್ತಿಗೊಂಡು ಈ ಅಕ್ಷರ ಮಾತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಕಾಯಕದಲ್ಲಿ ತೊಡಗಿರುವ ಶಿಕ್ಷಕ- ಶಿಕ್ಷಕಿಯರಿಗೆ ಜನರು ಹ್ಯಾಟ್ಸ್ ಆಫ್ ಹೇಳಲೇಬೇಕಾಗಿದೆ.
- ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2022 03:05 pm