ಹುಬ್ಬಳ್ಳಿ:ಅವರೆಲ್ಲ ನಗರದ ಅಂದವನ್ನು ಹೆಚ್ಚಿಸುವ ಪೌರಕಾರ್ಮಿಕರು. ನಗರಗಳು ಸ್ವಚ್ಛಂದವಾಗಿರಬೇಕೆಂದ್ರೆ ಅವರು ಬೇಕೆ ಬೇಕು. ಆದರೆ, ಅಂಥವರ ಬದುಕು ಇದೀಗ ಬೀದಿಗೆ ಬಂದಿದೆ. ಸರ್ಕಾರದ ನೇರನೇಮಕಾತಿ ಯೊಜನೆಯ ಹೊಡೆತಕ್ಕೆ, ಕೈಯಲ್ಲಿರುವ ಕೆಲಸವನ್ನು ಕಳೆದುಕೊಂಡು ಕಂಗಾಲಾಗಿರೋ ಪೌರಕಾರ್ಮಿಕರು ಹೋರಾಟದ ಹಾದಿ ಹಿಡಿದಿದ್ದಾರೆ.ಏನಿದು ಸ್ಟೋರಿ ಅಂತೀರಾ ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್...
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ರಾಜ್ಯ ಸರಕಾರ ನೇರ ವೇತನ ಪಾವತಿ ಯೋಜನೆ ಆರಂಭಿಸಿದ್ದರಿಂದ, ನಗರದ ಸ್ವಚ್ಛತೆಗೆ ನೀಡಲಾಗುತ್ತಿದ್ದ ಗುತ್ತಿಗೆ ಪದ್ಧತಿ ಡಿಸೆಂಬರ್ 1 ರಿಂದ ನಿಲ್ಲಿಸಲಾಗಿದೆ. ಇದರಿಂದಾಗಿ ಕೆಲಸಕ್ಕೆ ಹೋಗುತ್ತಿದ್ದ ನೂರಾರು ಕಾರ್ಮಿಕರಿಗೆ ಕೆಲಸ ಮಾಡದಂತೆ ಗುತ್ತಿಗೆದಾರರು ಹೇಳಿ, ಮರಳಿ ಕಳುಹಿಸುತ್ತಿದ್ದಾರೆ. ಇದರಿಂದ ಆತಂಕಗೊಂಡಿರೋ ಕಾರ್ಮಿಕರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ , ಮಹಾನಗರ ಪಾಲಿಕೆ ಕಚೇರಿ, ಶಾಸಕರನೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿರುವ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಇವರಿಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಬೇಡವಾದಾಗ ಕೆಲಸ ಬಿಟ್ಟು ಹೋಗಿ ಅಂತಾರೆ. ನಮ್ಮ ಈ ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಪರಿಹಾರ ಒದಗಿಸಬೇಕು. ಇಲ್ಲವಾದರೆ ನಾವು ವಿಷ ಸೇವಿಸುತ್ತೇವೆ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1800 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರೆಲ್ಲ ಗುತ್ತಿಗೆದಾರರ ಅಡಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ಸರಕಾರ ಇದೀಗ ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಈ ಪೈಕಿ ಸುಮಾರು 1001 ಜನರಿಗೆ ಮಾತ್ರ ಕೆಲಸ ಸಿಕ್ಕಿದೆ. ಅಲ್ಲದೇ ಗುತ್ತಿಗೆ ಪದ್ಧತಿಯೂ ರದ್ದಾಗಿದೆ. ಹೀಗಾಗಿ ಇದೀಗ ನೂರಾರು ಪೌರ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅಲ್ಲದೇ ಇದೀಗ ಸರಕಾರ ನೇರ ನೇಮಕಾತಿಯನ್ನು ಮಾಡಿಕೊಳ್ಳಲು ನಿರ್ಧರಿಸಿದೆ. ಒಂದು ವೇಳೆ ನೇರ ನೇಮಕಾತಿ ನಡೆದರೆ ಹತ್ತಾರು ವರ್ಷಗಳ ಕಾಲ ದುಡಿದ ಅನೇಕರು ಈ ಹುದ್ದೆಗೆ ಅರ್ಹತೆ ಪಡೆಯೋದೇ ಇಲ್ಲ. ಇಷ್ಟು ದಿನ ಇದೇ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದವರು ಅಕ್ಷರಶಃ ಬೀದಿಗೆ ಬೀಳೋ ಸ್ಥಿತಿ ಬಂದೊದಗುತ್ತದೆ. ಹೀಗಾಗಿ ಇದೀಗ ಹೋರಾಟ ಆರಂಭಿಸಿರೋ ಪೌರ ಕಾರ್ಮಿಕರು, ತಮ್ಮ ಗೋಳನ್ನು ಆಲಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ನಗರದ ಸ್ವಚ್ಛತೆಯೇ ತಮ್ಮ ಗುರಿ ಅಂತಾ ದುಡಿದ ಎಷ್ಟೋ ಕಾರ್ಮಿಕರು ಇದೀಗ ತಮ್ಮ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿದ್ದಾರೆ. ಒಮ್ಮಿಂದೊಮ್ಮೆಲೇ ಈ ರೀತಿಯ ನಿರ್ಧಾರಗಳನ್ನು ಸರಕಾರ ತೆಗೆದುಕೊಂಡರೆ ಅವರ ಗತಿ ಏನು? ಅನ್ನೋದನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕಾಗಿದೆ.
Kshetra Samachara
17/12/2020 07:58 pm