ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರು ಎಂದರೆ ಎಲ್ಲರೂ ತಾತ್ಸಾರ ಮನೋಭಾವನೆ ಹೊಂದುವುದು ಸಹಜ. ಆದರೆ, ಕೊರೊನಾ ಬಂದ ಮೇಲೆ ಸರ್ಕಾರಿ ವೈದ್ಯರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲೊಬ್ಬ ಯುವ ವೈದ್ಯ ಇದೆಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ.
ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ಯುವ ವೈದ್ಯನ ಹೆಸರು ಡಾ.ಮಯೂರೇಶ ಲೋಹಾರ. ಧಾರವಾಡದ ಕಮಲಾಪುರದ ನಿವಾಸಿ. ಸದ್ಯ ಹಾವೇರಿ ಜಿಲ್ಲೆಯ ಸವಣೂರು ತಾಲೂಕಾ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವರ್ಷ ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿಎ ಎಂಎಸ್ ಕೋರ್ಸ ಪೂರ್ಣಗೊಳಿಸಿದ ಮಯೂರೇಶ್, ಹಾವೇರಿ ಜಿಲ್ಲೆಯ ಸವಣೂರು ತಾಲೂಕಾ ಆಸ್ಪತ್ರೆಗೆ ಕೊರೊನಾ ವಾರ್ಡಿಗೆ ಆಯುಷ್ ವೈದ್ಯರಾಗಿ ನೇಮಕಗೊಂಡರು. ಈ ಕೊರೊನಾ ಸೋಂಕಿತರ ಮಧ್ಯೆ ಇದ್ದು, ತಾವು ಮಾಡಿದ ಕೆಲಸಕ್ಕೆ ಸರ್ಕಾರ ನೀಡಿದ ಸಂಬಳವನ್ನು ಯಾವುದಕ್ಕೂ ಬಳಕೆ ಮಾಡಿಕೊಳ್ಳದೇ ಒಂದು ದಿನ ರಜೆಯನ್ನೂ ಪಡೆಯದೇ ಕೂಡಿಟ್ಟ ಹಣದಲ್ಲಿ ಎನ್.95 ಮಾಸ್ಕ್ ಗಳನ್ನು ತೆಗೆದುಕೊಂಡು ಧಾರವಾಡದ ಮಾರುಕಟ್ಟೆ, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿಗಳು, ಕಾಲೇಜುಗಳಿಗೆ ತೆರಳಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.
ಸುಮಾರು 10 ಸಾವಿರ ಮಾಸ್ಕ್ ಗಳನ್ನು ತಮ್ಮ ಸ್ವಂತ ದುಡ್ಡಿನಲ್ಲಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ್ದಾರೆ. ಇದಕ್ಕೆ ತಗುಲಿದ ವೆಚ್ಚ ಬರೊಬ್ಬರಿ 1.50 ಲಕ್ಷ ರೂಪಾಯಿ.
ತಮ್ಮ ಸಾಮಾಜಿಕ ಸೇವೆ ಬಗ್ಗೆ ಸ್ವತಃ ಡಾ.ಮಯೂರೇಶ ಲೋಹಾರ ಅವರೇ ಹೇಳ್ತಾರೆ ಕೇಳಿ.
ಇದಕ್ಕೂ ಮುನ್ನ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಾಗ ಹುತಾತ್ಮರಾದ ಮಂಡ್ಯದ ಯೋಧನ ಕುಟುಂಬಕ್ಕೂ ಡಾ.ಮಯೂರೇಶ ಹಾಗೂ ಅವರ ಸ್ನೇಹಿತರು ದೇಣಿಗೆ ಸಂಗ್ರಹಿಸಿ ಆ ಯೋಧನ ಕುಟುಂಬಕ್ಕೆ ನೆರವಾಗಿದ್ದಾರೆ. ಆ ನಂತರ ಪ್ರವಾಹದಿಂದ ತತ್ತರಿಸಿದ ಬೆಳಗಾವಿ ಜಿಲ್ಲೆಯ ಜನರಿಗೂ, ದೇಣಿಗೆ ಸಂಗ್ರಹಿಸಿ ಆಹಾರ ಧಾನ್ಯ ಸೇರಿದಂತೆ ಇತರ ಸಾಮಗ್ರಿಗಳನ್ನು ನೀಡಿ ಬಂದಿದ್ದಾರಂತೆ.
ಅತೀ ಚಿಕ್ಕ ವಯಸ್ಸಿನಲ್ಲಿ ಆಯುಷ್ ವೈದ್ಯರಾಗಿರುವ ಡಾ.ಮಯೂರೇಶ ತಮ್ಮ ಕರ್ತವ್ಯದ ಜೊತೆಗೆ ಈ ರೀತಿಯ ಸಾಮಾಜಿಕ ಸೇವೆ ಮಾಡುತ್ತಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
17/11/2020 10:09 am