ಅಣ್ಣಿಗೇರಿ: ಜೈ ಜವಾನ್, ಜೈ ಕಿಸಾನ್ ಈ ಮಾತು ನಮ್ಮ ದೇಶದ ಯೋಧರು ಹಾಗೂ ರೈತರ ಧ್ಯೇಯವನ್ನು ನಿರೂಪಿಸುತ್ತದೆ, ಅದರಂತೆ ಇಲ್ಲೋಬ್ಬರು ಸೇವೆಯಲ್ಲಿ ಯೋಧನಾಗಿಯೂ ಸೇನೆ ರಜಾ ಅವಧಿಯಲ್ಲಿ ರೈತನಾಗಿಯೂ ಕೀರ್ತಿಗಳಿಸಿದ್ದಾರೆ.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಶಿವಾನಂದ ಪಕ್ಕೀರಪ್ಪ ಚವಡಿ ಅಸ್ಸಾಂ ಗಡಿಯಲ್ಲಿ ಸಿ.ಎಮ್.ಪಿ ಯೋಧನಾಗಿ ದೇಶ ಸೇವೆ ಮಾಡುತ್ತಾ, ರಜಾ ಅವಧಿಯಲ್ಲಿ ಊರಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಆಧಾರಿತ ಕೃಷಿ ಕಾಯಕದ ಮೂಲಕ ಅತ್ತ ಗಡಿ ಕಾಯಕ ಇತ್ತ ಕೃಷಿ ಕಾಯಕ ಎರಡರಲ್ಲೂ ಜೈ ಜೈ ಎನಿಸಿಕೊಂಡಿದ್ದಾರೆ.
ಮೂಲತಃ ಕೃಷಿ ಕುಟುಂಬದವರಾದ ಯೋಧ ಶಿವಾನಂದ ಚವಡಿ ಕಳೆದ 17 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜಾ ಅವಧಿಯಲ್ಲಿ ಭೂತಾಯಿ ಸೇವೆ ಮಾಡಿ ಅದರಲ್ಲೂ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡದ ಕೃಷಿಯಲ್ಲಿ ತಮ್ಮ 4 ಎಕರೆ 16 ಗುಂಟೆ ಹೊಲದಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ.
ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು ತಮ್ಮ ಜಮೀನಿನಲ್ಲಿ ಮುಂಗಾರು ಮೆಣಸಿನಕಾಯಿ ಬೆಳೆದು ಅತಿವೃಷ್ಟಿ ನಡುವೆ ಅಲ್ಪ ಲಾಭ ಪಡೆದು, ಹಿಂಗಾರು ಗೋಧಿ, ಕಡಲೆ, ಜೋಳ ಬೆಳೆಗಳ ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದಾರೆ.
ಸದಾ ಕ್ರಿಯಾಶೀಲರಾದ ಯೋಧ ಶಿವಾನಂದ ತಾಯ್ನಾಡ ಸೇವೆಯಂತೆ ಭೂತಾಯಿಯ ಮಡಿಲ ದುಡಿಮೆಯಲ್ಲೂ ಕೆಲಸ ಮಾಡಿ, ಮಳೆ ಅಭಾವದ ನಡುವೆಯೂ ರೈತರಿಗೆ ಕೃಷಿಹೊಂಡದ ವರ ನೀಡಿದ ದೇಶಪಾಂಡೆ ಫೌಂಡೇಶನ್'ಗೆ ಒಂದು ಸೆಲ್ಯೂಟ್ ಅಂತಾರೇ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/02/2022 09:52 pm