ಗದಗ: ಈ ಕೃಷಿ ಅಂದ್ರೇ ಹೀಗೆ ಒಮ್ಮೆ ಅಪ್ಪಟ ಕೃಷಿಕರಾಗಿ ಭೂತಾಯಿ ಓಡಲಲ್ಲಿ ಕೈ ಇಟ್ರೇ ಮುಗೀತು, ಇಲ್ಲಿ ನಿವೃತ್ತಿ ಇಲ್ಲಾ ಪದೋನ್ನತಿ ಇಲ್ಲಾ, ಆದ್ರೇ ಎಲ್ಲಿಲ್ಲದ ತೃಪ್ತಿ, ಮಹದಾನಂದ ಕೃಷಿಯಲ್ಲಿನ ಖುಷಿಗೆ ಪಾರವೇ ಇಲ್ಲಾ ಬಿಡಿ.
ಅರೆ.! ಈಗ್ಯಾಕೆ ಇಷ್ಟು ಪೀಠಿಕೆ ಅಂದ್ರಾ ? ಅದೇ ಸ್ವಾಮಿ ನಮ್ಮ ಮದಗಾನೂರು ಗ್ರಾಮದ ಹಿರಿಯರೊಬ್ಬರು ಈ 66 ರ ಇಳಿ ವಯಸ್ಸಿನಲ್ಲೂ ಉತ್ಸಾಹದ ಕೃಷಿ ಕಾಯಕಕ್ಕೆ ನಿವೃತ್ತಿ ಎಂಬ ಮಾತನ್ನು ಬದಿಗೊತ್ತಿ ತೃಪ್ತಿ ಎಂಬ ಅಂಶ ಬೆನ್ನಟ್ಟಿ ವಿಧ ವಿಧ ಬೆಳೆ ಬೆಳೆದಿದ್ದಾರೆ. ಅದು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು.
ಮದಗಾನೂರ ಗ್ರಾಮದ ಹಿರಿಯ ರೈತ ಹಣುಮರೆಡ್ಡಿ ತಿರ್ಲಾಪೂರ ತಮ್ಮ 26 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು 200/200 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಕಡಲೆ, ಗೋಧಿ, ಜೋಳ, ಕುಸುಬೆ, ಹವೀಜ, ಬೆಳೆದು ಬೇಷ್ ಎನಿಸಿಕೊಂಡಿದ್ದಾರೆ.
ಈ ಮೊದಲು ಆರಂಭದಲ್ಲಿ ಸತತ 8 ವರ್ಷ ಸಾವಯವ ಕೃಷಿ ಅನುಸರಿಸಿದ ರೈತ ಹಣುಮರೆಡ್ಡಿ ಅದಕ್ಕೆ ಪೂರಕವಾದ ಬೆಲೆ ಹಾಗೂ ಮಾರುಕಟ್ಟೆ ಸಿಗದೇ ಮರಳಿ ಸಹಜ ಕೃಷಿಗೆ ವಾಲಿ, ಈ ವರ್ಷ ಮುಂಗಾರು ಮೆಣಸಿನಕಾಯಿ, ಹೆಸರು ಬೆಳೆದು ಹಿಂಗಾರು ಗೋಧಿ, ಜೋಳ, ಕಡಲೆ, ಕುಸುಬೆ, ಹವೀಜ ಬೆಳೆದು ಕೃಷಿಹೊಂಡದ ಆದಾಯದ ಕನಸನ್ನು ಸಾಕಾರ ಮಾಡಿದ್ದಾರೆ.
ಈ ಹಿಂದೆ ಒಣ ಬೇಸಾಯದ ಮಾರ್ಗ ಕಂಡುಕೊಂಡು ಅರ್ಧ ಲಾಭ ಇನ್ನರ್ಧ ಲಾಸು, ಎಂಬ ಸ್ಥಿತಿಯಲ್ಲಿದ್ದ ಕೃಷಿ ಬದುಕು ಈಗ ಮಳೆ ಕಡಮೆಯಾದರೂ ಕೃಷಿಹೊಂಡ ಇದೇ ಎಂಬ ಧೈರ್ಯದ ಜೊತೆ, ಮಳೆ ಲೆಕ್ಕಿಸದೇ ಕೃಷಿಹೊಂಡ ನೀರನ್ನು ಬಳಸಿ ತಮಗೆ ಬೇಕಾದ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಒಟ್ಟಾರೆ ಕೃಷಿ ಕ್ಷೇತ್ರ ಶ್ರೀಮಂತವಾಗಲೂ ಅದೆಷ್ಟೋ ಉತ್ಸಾಹಿ ರೈತರಿಗೆ ಈ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಬದುಕು ಕೊಟ್ಟಿದೆ ಎಂದ್ರೇ ರೈತರು ಹೌದು ಹೌದು ಎಂತಾರೇ.
Kshetra Samachara
24/01/2022 09:15 pm