ನವಲಗುಂದ : ಕೃಷಿ ಭೂಮಿಯ ತುಂಬಾ ಚಾಚಿಕೊಂಡ ಹಸಿರು ಫಲ, ಸೂರ್ಯನಿಗೆ ಕಿರಣ ಚುಂಬಿಸುವ ಸೂರ್ಯಕಾಂತಿ ಬೆಳೆ, ಇನ್ನಷ್ಟು ದುಡಿಯಬೇಕು ಆದಾಯ ಗಳಿಸಬೇಕು ಎಂಬ ಛಲ, ಈ ಛಲಕ್ಕೆ ರೈತನಿಗೆ ಬಲ ತುಂಬಿದೆ ಕೃಷಿಹೊಂಡದ ಜಲ.
ಇಂತಹದ್ದೊಂದು ಬದಲಾವಣೆಗೆ ಸಾಕ್ಷಿಯಾಗಿದದ್ದೇ ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದ ರೈತ ಪಾಂಡುರಡ್ಡಿ ಬಾಳರಡ್ಡಿ ಕಿರೇಸೂರವರ ಹೊಲ. ಒಣ ಬೇಸಾಯದ ಭೂಮಿಯಲ್ಲಿ ಬೆವರ ನೀರಲ್ಲಿ ಬೀಜ ಬಿತ್ತನೆ ಮಾಡುವ ಮಟ್ಟಿಗೆ ನೀರಿನ ಅಭಾವ ಎದುರಿಸಿದ ರೈತರ ಬಾಳಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಹೊಸ ಬೆಳಕು ಚೆಲ್ಲಿ ಕೃಷಿ ಕ್ಷೇತ್ರ ಬಿಟ್ಟು ರೈತ ಕದಲದಂತೆ ಮಾಡಿದೆ.
ಈ ಯೋಜನೆ ಮೂಲಕವೇ ರೈತ ಪಾಂಡುರೆಡ್ಡಿ ಕಿರೇಸೂರು ತಮ್ಮ 4 ಎಕರೆ 20 ಗುಂಟೆ ಜಮೀನನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣ ಮಾಡಿ ಹೆಸರು, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆ ಬೆಳೆದು ಈಗಾಗಲೇ ಈರುಳ್ಳಿ ಹಾಗೂ ಹೆಸರು ಬೆಳೆಯ ಆದಾಯ ಪಡೆದಿದ್ದಾರೆ.
ಇದೇ ಮೊದಲು ಒಣ ಬೇಸಾಯದ ಭೂಮಿಯಲ್ಲಿ ದುಪ್ಪಟ್ಟು ಶ್ರಮ ಹಾಕಿದ್ರೂ, ತೆಗೆಯದ ಆದಾಯವನ್ನು ಅತಿ ಕಡಿಮೆ ಶ್ರಮದಲ್ಲಿ ಕೃಷಿಹೊಂಡ ಆಶ್ರಿತ ನೀರಾವರಿ ಬೇಸಾಯದ ಮೂಲಕ ಎಕರೆ ನಿವ್ವಳ 50 ಸಾವಿರ ರೂಪಾಯಿಯಂತೆ ನಾಲ್ಕು ಎಕರೆಗೆ ಬರೋಬ್ಬರಿ 2.50 ಲಕ್ಷ ಹೆಚ್ಚಿನ ಆದಾಯಕ್ಕೆ ಸೈ ಎಂದಿದ್ದಾರೆ.
ಇದಲ್ಲದೆ ಸೂರ್ಯಕಾಂತಿ, ಗೋವಿನಜೋಳ, ಇನ್ನಷ್ಟು ಆದಾಯ ತಂದುಕೊಡುವ ನಿಟ್ಟಿನಲ್ಲಿ ರೈತ ಪಾಂಡುರೆಡ್ಡಿ ಜಮೀನಲ್ಲಿ ವಿಸ್ತಾರವಾಗಿ ಚಾಚಿಕೊಂಡು ಹುಲುಸಾಗಿದೆ.
ಒಟ್ಟಾರೆ ಕೃಷಿಹೊಂಡ ನಿರ್ಮಾಣ ಯೋಜನೆ ರೈತರ ಬಾಳಲ್ಲಿ ಹೊಸ ಭರವಸೆಯ ಬೆಳಕು ಚೆಲ್ಲಿ ಕೃಷಿ ಕ್ಷೇತ್ರಕ್ಕೆ ಬಲ ತುಂಬಿದೆ.
Kshetra Samachara
24/10/2021 10:05 am