ಮಳೆ ಇಲ್ಲ, ಬೆಳೆ ಇಲ್ಲ, ಗೂಳೆ ಹೋಗುವುದು ತಪ್ಪಲೇ ಇಲ್ಲ, ದುಡ್ಕೊಂಡು ತಿನ್ನೊಕು ನಮ್ಮೂರಲ್ಲಿ ಗತಿ ಇಲ್ಲ ಎನ್ನುವ ಕಾಲ ಒಂದಿತ್ತು. ಆದ್ರೆ ಈಗ ಹಾಗಲ್ಲ ನೋಡಿ ಕೃಷಿ ನಮ್ಮ ಕೈ ಬಿಡದೆ ನಡೆಸುತ್ತಿದೆ. ಅದರಲ್ಲೂ ದೇಶಪಾಂಡೆ ಫೌಂಡೇಶನ್ ಸಹಕಾರದಿಂದ ಇಂದು ನಮ್ಮ ಕೃಷಿ ಜೀವನಕ್ಕೆ ನವ ಚೈತನ್ಯ ಸಿಕ್ಕಿದೆ ಎನ್ನುತ್ತಾರೆ ಪ್ರಗತಿಪರ ರೈತ ಬಾಲರೆಡ್ಡಿ ಕರ್ಮಳಿ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ರೈತ ಬಾಲರೆಡ್ಡಿ ಅವರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅವರ ಈ ಪ್ರಯೋಗಗಳಿಗೆ ಸಾಥ್ ನೀಡಿದ್ದು, ಕೃಷಿ ಹೊಂಡ.... 2013ಕ್ಕೂ ಮುನ್ನ ಒಣಬೇಸಾಯ ಕೃಷಿ ಮಾಡುತ್ತಿದ್ದ ಬಾಲರೆಡ್ಡಿ ಅವರು ಇಂದು ಕೃಷಿ ಹೊಂಡದ ನೀರಿನ ಸಹಾಯದಿಂದ ದವಸ ಧಾನ್ಯದ ಜೊತೆಗೆ ತರಕಾರಿ, ಹಣ್ಣು, ವಾಣಿಜ್ಯ ಬೆಳೆಯನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಕೃಷಿ ಹೊಂಡ ನಿರ್ಮಾಣವಾದ ಬಳಿಕ ನಮಗೆ ಬೇಕಾಗುವ ತರಕಾರಿ, ಬೀಜಗಳನ್ನು ನಾವೇ ಬೆಳೆಯುತ್ತಿದ್ದೇವೆ. ಮನೆಗೆ ಅಗತ್ಯ ಇರುವಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮಾರುತ್ತೇವೆ. ಹೀಗಾಗಿ ಕುಟುಂಬ ನಿರ್ವಹಣೆ ಖರ್ಚು ಕಡಿಮೆಯಾಗಿದೆ ಎನ್ನುತ್ತಾರೆ ಬಾಲರೆಡ್ಡಿ ಅವರು.
ಕೃಷಿ ಕಾಯಕದ ಜೊತೆಗೆ ಇತರ ರೈತರಿಗೆ ಸಹಾಯ, ಸಹಕಾರ ನೀಡುವ ಕೆಲಸವನ್ನು ಬಾಲರೆಡ್ಡಿ ಅವರು ಮಾಡುತ್ತಿದ್ದಾರೆ. ಹೌದು.. ಫಾರ್ಮರ್ ಪ್ರೊಡಕ್ಷನ್ ಆರ್ಗನೈಜೇಶನ್‌ನ ಕಲ್ಮೇಶ್ವರ ಸಂಘದ ನಿರ್ದೇಶಕರಾಗಿರುವ ಅವರು, ಸಂಘದಿಂದ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ, ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ.
'ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು' ಎಂಬ ದಾಸವಾಣಿಗೆ ಬಾಲರೆಡ್ಡಿಯವರು ಸಾಕ್ಷಿಯಾಗಿದ್ದಾರೆ. ಅವರ ಸಲಹೆ, ಮಾರ್ಗದರ್ಶನ ಹೀಗೆ ಸಾವಿರಾರು ಯುವ ಕೃಷಿಕರಿಗೆ ಸಿಗಲಿ ಎಂದು ಹಾರೈಸೋಣ..
Kshetra Samachara
23/02/2021 08:27 pm