ನವಲಗುಂದ: ''ಎಲ್ಲಿ ನೀರು ಇರುತ್ತೋ ಅಲ್ಲಿ ನಾಗರಿಕತೆ ಇರುತ್ತೆ. ಅಂತಹ ಉನ್ನತ ನಾಗರಿಕತೆಗಳನ್ನು ಕಂಡ ನಾವು ನೀರು, ನಿಸರ್ಗದ ರಕ್ಷಣೆ ಮಾಡುವ ಮೂಲಕ ಜಗತ್ತಿಗೆ ಏನಾದರೂ ಕೊಡುಗೆ ನೀಡಬೇಕು'' ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳುತ್ತಾರೆ. ಇಂತಹ ಮಹತ್ ಕಾರ್ಯವನ್ನು ದೇಶಪಾಂಡೆ ಫೌಂಡೇಶನ್ ಮಾಡುತ್ತಿದೆ.
ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರೆ ತಾಲೂಕಿನ ರೈತರಿಗೆ ಕೃಷಿ ಹೊಂಡ ನಿರ್ಮಿಸಿಕೊಟ್ಟು ಆಶಾ ಕಿರಣ ಮೂಡಿಸಿರುವ ದೇಶಪಾಂಡೆ ಫೌಂಡೇಶನ್ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿ ತೋರಿಸಿದೆ. ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಕೆರೆ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡು ಗ್ರಾಮದ ಜನರಿಗೆ ಶುದ್ಧ ಕುಡಿಯುವ ಒದಗಿಸಲು ಶ್ರಮಿಸುತ್ತಿದೆ.
8.18 ಎಕರೆ ವಿಸ್ತಾರ ಹೊಂದರಿರುವ ಕಡದಳ್ಳಿ ಗ್ರಾಮದ ಕೆರೆಯ ಸುತ್ತಲೂ ಮುಳ್ಳು ಕಂಟಿ ಬೆಳೆದಿತ್ತು. ಇದರಿಂದಾಗಿ ಮಹಿಳೆಯರು ಒಬ್ಬೊಬ್ಬರೇ ಬಂದು ನೀರು ತುಂಬಿಕೊಂಡು ಹೋಗಲು ಭಯಪಡುತ್ತಿದ್ದರು. ಅಷ್ಟೇ ಅಲ್ಲದೆ ಜಾಲಿ ತಪ್ಪಲು ಬಿದ್ದು ನೀರು ಹಾಳಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮದ ಕೆಲ ಮುಖಂಡರು ಕೆರೆ ಜೀರ್ಣೋದ್ಧಾರ ಮಾಡಿಕೊಡುವಂತೆ ದೇಶಪಾಂಡೆ ಫೌಂಡೇಶನ್ ಸಹಾಯ ಕೇಳಿದ್ದರು. ಇದಕ್ಕೆ ಸ್ಪಂದಿಸಿದ ಫೌಂಡೇಶನ್ ಕೆರೆಯ ಸುತ್ತಲಿನ ಮುಳ್ಳು ಕಂಟಿ ತೆಗೆದಿದೆ. ಅಷ್ಟೇ ಅಲ್ಲದೆ ಕೆರೆಯನ್ನು ಮತ್ತಷ್ಟು ವಿಸ್ತರಿಸಿದೆ. ಇದರಿಂದಾಗಿ ಕೆರೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದೆ.
ಬೇಸಿಗೆ ಬಂದ್ರೆ ಸಾಕು ಕೆಲ ಗ್ರಾಮಗಳಲ್ಲಿ ಹಾಹಾಕಾರ ಶುರುವಾಗುತ್ತದೆ. ಕೆಲವೊಮ್ಮೆ ಗ್ರಾಮದ ಕೆರೆಯಲ್ಲಿ ನೀರು ಇದ್ದರೂ ಕುಡಿಯಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಹತ್ತಾರು ಕಿಲೋ ಮೀಟರ್ ಕ್ರಮಿಸಿ ನೀರು ತರಬೇಕಾದ ಸಮಸ್ಯೆ ಎದುರಾಗುತ್ತದೆ. ಇಂತಹ ಪರಿಸ್ಥಿತಿ ಎದುರಾಗಬಾರದು ಅಂತ ದೇಶಪಾಂಡೆ ಫೌಂಡೇಶನ್ ತೋರುತ್ತಿರುವ ಸಾಮಾಜಿಕ ಕಾಳಜಿ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
23/02/2021 06:40 pm