ಹುಬ್ಬಳ್ಳಿ: ಸರಕಾರ ಬೆಂಬಲ ಬೆಲೆಯಡಿಯಲ್ಲಿ ಕಡಲೆ ಖರೀದಿ ಮಾಡಿದಾಗ ಅನ್ನದಾತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಕಡಲೆ ನೀಡಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಈ ಹಣವನ್ನ ಸಾಲದ ಮೊತ್ತಕ್ಕೆ ಬ್ಯಾಂಕ್ ಗಳು ಸರಿ ಮಾಡಿಕೊಳ್ಳುತ್ತಿವೆ. ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಅದು ಎಲ್ಲಿ ಅಂತಿರಾ ಈ ವರದಿ ನೋಡಿ..
ಲಾಕ್ ಡೌನ್ ಹಾಗೂ ಕೊರೊನಾ ಹೊಡೆತಕ್ಕೆ ಅನ್ನದಾತ ತತ್ತರಿಸಿ ಹೋಗಿದ್ದಾನೆ. ಈಗ ಕಡಲೆ ಮಾರಿದ್ದ ರೈತರ ಖಾತೆಗಳಿಗೆ ಸರಕಾರದಿಂದ ಹಣ ಜಮಾ ಆಗಿದೆ. ದುರಂತ ಅಂದರೆ ಬ್ಯಾಂಕ್ ಖಾತಗೆ ಹಣ ಬಂದಿದ್ದು, ಅದನ್ನ ರೈತರು ಡ್ರಾ ಮಾಡಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗುವ ಮೂಲಕ ಧಾರವಾಡ ಜಿಲ್ಲೆಯ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಕಡಲೆ ಬೆಳೆಯನ್ನ ಬೆಂಬಲ ಬೆಲೆಗೆ ರೈತರು ಮಾರಾಟ ಮಾಡಿದ್ದರು. ಹೆಬಸೂರು, ಕಿರೇಸೂರು ಗ್ರಾಮವೊಂದರಲ್ಲೆ ಸುಮಾರು ಸಾವಿರಾರು ರೈತರ ಖಾತೆಗಳಿಗೆ ಹಣ ಜಮಾ ಆಗಿದೆ. ಹೆಬಸೂರಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ ದವರು ಮಾತ್ರ ರೈತರ ಬೆಳೆಸಾಲಕ್ಕೆ, ಬಂದಿರುವ ಹಣವನ್ನ ಸರಿ ಮಾಡಿಕೊಳ್ಳುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬ್ಯಾಂಕ್ ಖಾತೆಗಳನ್ನ ಬ್ಯಾಂಕ್ ಅಧಿಕಾರಿಗಳು ಬ್ಲಾಕ್ ಮಾಡಿದ್ದು, ತಮ್ಮ ಖಾತೆಯಲ್ಲಿ ಹಣ ಇದ್ದರು ಈಗ ಡ್ರಾ ಮಾಡಲಾಗದ ಸ್ಥಿತಿ ರೈತರದ್ದಾಗಿದೆ.
ಧಾರವಾಡ ಜಿಲ್ಲೆಯ 24334 ರೈತರು ಕಡಲೆ ನೀಡಿದ್ದರು. 208468 ಕ್ವಿಂಟಾಲ ಕಡಲೆ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಲಾಗಿತ್ತು. 1016281500 ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತಗೆ ಹಣ ಪಾವತಿ ಮಾಡಲಾಗಿದೆ. ಆದರೆ ಹೆಬಸೂರಿನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು ಬೆಳೆ ಸಾಲ ಬಾಕಿ ಉಳಿಸಿಕೊಂಡಿರುವ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಬದಲಾಗಿ ಕಡಲೆ ಮಾರಿ ಬಂದ ಹಣವನ್ನ ಬೆಳೆ ಸಾಲಕ್ಕೆ ಸರಿ ಮಾಡಿಕೊಳ್ಳುತ್ತಿದ್ದಾರೆ.
Kshetra Samachara
05/10/2020 08:54 pm