ಹುಬ್ಬಳ್ಳಿ: ಧಾರವಾಡ ಜಿಲ್ಲೆಯನ್ನೇ ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಮಾಧ್ಯಮ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವ ಪಬ್ಲಿಕ್ ನೆಕ್ಸ್ಟ್ ಈಗ ರಾಜ್ಯಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಮಾಧ್ಯಮ ಜವಾಬ್ದಾರಿ ಜೊತೆಗೆ ಸಾಮಾಜಿಕ ಸೇವೆಯಲ್ಲೂ ಪಬ್ಲಿಕ್ ನೆಕ್ಸ್ಟ್ ಕಾರ್ಯ ತತ್ಪರವಾಗಿದ್ದು, ಈ ನಿಟ್ಟಿನಲ್ಲಿ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿ ಗೋಕುಲ ರೋಡ್ ಅಕ್ಷಯ ಪಾರ್ಕ್ ನಲ್ಲಿರುವ ಜೈಂಟ್ಸ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಆರೋಗ್ಯ ತಪಾಸಣೆ ಶಿಬಿರಕ್ಕೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮುಖ್ಯಸ್ಥರಾದ ಮಂಜುನಾಥ ರಾವ್, ರಾಘವೇಂದ್ರ ರಾವ್ ಹಾಗೂ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿಯ ಅಧ್ಯಕ್ಷರಾದ ಡಾ.ಮನೋಜ್ ಭಟ್, ಎಂ.ಕೆ.ಬಾಬಜಿ, ಜಿ.ಎಸ್. ನಾಯಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪಬ್ಲಿಕ್ ನೆಕ್ಸ್ಟ್ ಸಿಇಒ ಮಂಜುನಾಥ ರಾವ್, ಜೈಂಟ್ಸ್ ಗ್ರೂಪ್ ಹಾಗೂ ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದ ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.
ಒಂದೇ ಸೂರಿನಡಿಯಲ್ಲಿ ಹಲವಾರು ಯೋಜನೆ ಎಂಬುವಂತೇ ಒಂದೇ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹತ್ತು ಹಲವು ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು- ಪಾಲಕರು ಹಾಗೂ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಶಾಲೆಗೆ ಆಗಮಿಸುವ ಮೂಲಕ ಆರೋಗ್ಯ ತಪಾಸಣೆ ಶಿಬಿರದ ಲಾಭ ಪಡೆದುಕೊಂಡರು. ಇದೇ ವೇಳೆ ಜೈಂಟ್ಸ್ ಗ್ರೂಪ್ ಹಾಗೂ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮೂಲಕ ಆರೋಗ್ಯ ಶಿಬಿರಕ್ಕೆ ಆಗಮಿಸಿದ ವೈದ್ಯರಿಗೆ ಗೌರವ ಸಲ್ಲಿಸಲಾಯಿತು.
ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ 3ನೇ ಆರೋಗ್ಯ ತಪಾಸಣೆಗೆ ಆರಂಭದಿಂದಲೇ ಸಾಕಷ್ಟು ಜನಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2022 01:37 pm