ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ಆದರೆ ಅದೆಷ್ಟೋ ಯೋಜನೆಗಳು ಕೊನೆಯ ವ್ಯಕ್ತಿಯವರೆಗೂ ಮುಟ್ಟುವುದೇ ಇಲ್ಲ. ಅಂತಹ ಮಹತ್ವದ ಕಾರ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯಕ್ಕೆ ಹುಬ್ಬಳ್ಳಿಯ ಸಂಘಟನೆಗಳು ಸ್ವಯಂಪ್ರೇರಿತವಾಗಿ ಕಾರ್ಯ ನಿರ್ವಹಿಸುತ್ತಿವೆ.
ಕಿಲ್ಲರ್ ಕೊರೋನಾ ಹಾಗೂ ಓಮೈಕ್ರಾನ್ ವೈರಸ್ ನಿಯಂತ್ರಣಕ್ಕೆ ಪಣತೊಟ್ಟಿರುವ ಕೇಂದ್ರ ಸರ್ಕಾರದ ವ್ಯಾಕ್ಸಿನ್ ವಿತರಣೆ ಅಭಿಯಾನಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಚಿಗುರುಪಾಟಿ ವಿ.ಎಸ್.ವಿ ಪ್ರಸಾದ ಅವರ ನಿರ್ದೇಶನದಲ್ಲಿ ಹುಬ್ಬಳ್ಳಿಯ ಕೆ.ಎಚ್.ಪಟವಾ ಫೌಂಡೇಶನ್ ಹಾಗೂ ರಾಷ್ಟ್ರೋತ್ಥಾನ ರಕ್ತ ನಿಧಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿ ವ್ಯಾಕ್ಸಿನ್ ವಿತರಣೆ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ಹೊತ್ತಿದೆ.
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿಯೂ ಜನರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಲಸ ಕಾರ್ಯವಿಲ್ಲದೇ ಹಾಗೂ ಹೊರಗಡೆ ಓಡಾಡದೇ ಮನೆಯಲ್ಲಿ ಇರುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ವಿತರಣೆ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕೆ.ಎಚ್.ಪಟವಾ ಫೌಂಡೇಶನ್ ನಿಂದ ಮಾರ್ಚ್ 2021ರಿಂದ ಆರಂಭಗೊಂಡ ಅಭಿಯಾನ ಇದುವರೆಗೂ 9800 ವ್ಯಾಕ್ಸಿನ್ ವಿತರಣೆ ಮಾಡಿದ್ದು, ಇಂದು ಕೂಡ 200 ಜನರಿಗೆ ವ್ಯಾಕ್ಸಿನ್ ವಿತರಣೆ ಮಾಡುವ ಕಾರ್ಯವನ್ನು ಮಾಡಿದೆ.
ಇನ್ನೂ ವಿನೋದ ಕುಮಾರ್ ಪಾಟವಾ, ಗೌರವ ಜೈನ, ಮಹಾವೀರ ಪಾಟವಾ, ದತ್ತಮೂರ್ತಿ ಕುಲಕರ್ಣಿ, ರೋಹಿತ ಮೆಹ್ತಾ, ಕಿಶನ್ ಕಟಾರಿಯಾ ಸಹಯೋಗದೊಂದಿಗೆ ಇಂತಹದೊಂದು ಮಹತ್ವದ ಕಾರ್ಯವನ್ನ ಮಾಡುತ್ತಿದ್ದು, ಸರ್ಕಾರದ ಯೋಜನೆ ಕೊನೆಯ ವ್ಯಕ್ತಿಗೂ ತಲುಪಬೇಕು ಎಂದು ರಾಷ್ಟ್ರೋತ್ಥಾನ ರಕ್ತ ನಿಧಿಯ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಅವಳಿನಗರದ ಜನರು ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿ ಎಂಬುವುದು ನಮ್ಮ ಆಶಯ..
Kshetra Samachara
08/01/2022 07:13 pm