ಹುಬ್ಬಳ್ಳಿ : ತುರ್ತು ಸಮಯದಲ್ಲಿ ಒಂದು ಜೀವ ಉಳಿಸಲು ರಕ್ತದ ಅವಶ್ಯಕತೆ ಇದೆ. ಹೀಗಾಗಿ ನಾವೆಲ್ಲರೂ ರಕ್ತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಾಟ್ಸಪ್ ದಲ್ಲಿ ಕೇವಲ ಫೋಟೊ,ವಿಡಿಯೋ ಹಂಚಿಕೊಳ್ಳುವ ಬದಲು ಲಭ್ಯವಿರುವ ರಕ್ತದಾನಿಗಳ ವಿವರ ಹಂಚಿಕೊಳ್ಳಬೇಕು ಎಂದು ಉತ್ತರ ಕರ್ನಾಟದ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಡಾ.ವಿನೋದ ಕುಮಾರ್ ನುಡಿದರು.
ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಭಾನುವಾರ ದಿ. 10 ರಂದು ನಗರದ ಸ್ಟೇಶನ್ ರಸ್ತೆಯ ಹೆಡ್ ಪೋಸ್ಟ್ ಆಫೀಸ್ ದಲ್ಲಿ ಅಂಚೆ ಸಿಬ್ಬಂದಿಯ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಧಾರವಾಡ ವಿಭಾಗದಲ್ಲಿ 600 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಆದರೆ ಕೇವಲ 100 ಸಿಬ್ಬಂದಿ ರಕ್ತದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸಿಬ್ಬಂದಿ ಪಾಲ್ಗೊಳ್ಳುವರು ಎಂದು ಆಶಿಸುವೆ. ಮಹಿಳೆಯರೂ ಸಹ ಬೆರಳೆಣಿಕೆಯಲ್ಲಿದ್ದಾರೆ ಅವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಲಿ ಎಂದರು.
ರಕ್ತದಾನದಿಂದ ಆರೋಗ್ಯದಲ್ಲಿ ಏರುಪೇರಾಗಬಹುದೆಂದು ಕೆಲವರಲ್ಲಿ ಭಯವಿದೆ. ಹೀಗಾಗಿ ವೈದ್ಯ ಸಮುದಾಯ ರಕ್ತದಾನದಿಂದ ಯಾವುದೇ ತೊಂದರೆ ಇಲ್ಲವೆಂಬುದನ್ನು ಜನಸಾಮಾನ್ಯರಲ್ಲಿ ಮನವರಿಕೆ ಮಾಡಿಕೊಡಬೇಕೆಂದರು.
ಮುಖ್ಯ ಅತಿಥಿಯಾಗಿ ಕಿಮ್ಸ್ ಹಂಗಾಮಿ ನಿರ್ದೇಶಕ ಡಾ. ಅರುಣಕುಮಾರ , ಪ್ರಾಚಾರ್ಯ ಡಾ. ಈಶ್ವರ್ ಹೊಸಮನಿ, ಸೀನಿಯರ್ ಪೋಸ್ಟ್ ಮಾಸ್ಟರ್ ದೇವಶೆಟ್ಟಿ, ಡಾ. ಕವಿತಾ ಏವೂರ್ ಧಾರವಾಡ ವಿಭಾಗದ ಪೋಸ್ಟ್ ಆಫೀಸ್ ಹಿರಿಯ ಅಧೀಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
11/10/2021 10:19 am