ಧಾರವಾಡ: ಕೊರೊನಾ ವೈರಾಣು ತಡೆಯಲು ದೇಶದಾದ್ಯಂತ ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದರೂ ಕೂಡ ಇದುವರೆಗೆ ಲಸಿಕೆ ಪಡೆಯದೇ ಇರುವವರಿಗೆ ಮುಕ್ತವಾಗಿ ಲಸಿಕೆ ಹಾಕಲು ಫೆ.22 ,23 ಹಾಗೂ 24 ರಂದು ಮಾಪ್ ಅಪ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ದಿನಗಳಲ್ಲಿ ಯಾವುದೇ ಎಸ್‍ಎಂಎಸ್ ಬಾರದಿದ್ದರೂ ಕೂಡ ನೋಂದಾಯಿತ ವ್ಯಕ್ತಿಗಳು ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಕೆ.ಪಾಟೀಲ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದ 28750 ಆರೋಗ್ಯ ಕಾರ್ಯಕರ್ತರ ಪೈಕಿ ಇದುವರೆಗೆ 14191 ಜನ ಮೊದಲ ಡೋಸ್, 4156 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇದೀಗ ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಯ 8775 ಜನ ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ 3292 ಜನ ಅಂದರೆ ಶೇ.37.5 ರಷ್ಟು ಲಸಿಕೆ ಪಡೆದಿದ್ದಾರೆ. ಉಳಿದವರೂ ಕೂಡ ನಿಗದಿತ ದಿನಗಳಂದು ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಬೇಕು ಎಂದರು.
ಈಗಾಗಲೇ ಲಸಿಕೆ ನೋಂದಣಿಯಾಗಿ ಅನೇಕ ಬಾರಿ ಎಸ್‍ಎಂಎಸ್ ಮತ್ತಿತರ ಮಾಹಿತಿ ಬಂದಿದ್ದರೂ ಕೂಡ ಲಸಿಕೆ ಪಡೆಯಲು ಸಾಧ್ಯವಾಗದಿರುವವರಿಗೆ ಫೆ.22,23 ಹಾಗೂ 24 ರಂದು ಮಾಪ್ ಅಪ್ ಅಭಿಯಾನದ ಮೂಲಕ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಮೂರು ದಿನಗಳಲ್ಲಿ ಅವರು ಯಾವುದೇ ಸಂದೇಶಗಳು ಬಾರದಿದ್ದರೂ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆ ಪಡೆಯಬಹುದು. ಕೊರೊನಾ ವೈರಾಣು ನಿರ್ಮೂಲನೆಯಾಗಿಲ್ಲ, ಸಾರ್ವಜನಿಕರು ಮುಂಜಾಗೃತಾ ಕ್ರಮಗಳನ್ನು ನಿರ್ಲಕ್ಷಿಸದೇ ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ್ ಮದೀನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಮಾನಕರ್, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮತ್ತಿತರರು ಇದ್ದರು.
Kshetra Samachara
21/02/2021 04:39 pm