ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಧಾರವಾಡ: ಕೊರೊನದಂತಹ ಕಷ್ಟ ಕಾಲದಲ್ಲಿ ಕಾರ್ಯ ನಿರ್ವಹಿಸಿ, ತಮ್ಮ ಜೀವವನ್ನೂ ಲೆಕ್ಕಿಸದೇ ಜನರ ಜೀವವನ್ನು ಉಳಿಸುವ ಕಾರ್ಯ ಮಾಡಿದ್ದ ಕೊರೊನಾ ವಾರಿಯರ್ಸ್‌ಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೇಲಾಧಿಕಾರಿಗಳ ಕಿರುಕುಳ ಹಲವು ದಿನಗಳಿಂದ ಸಹಿಸಿಕೊಂಡು ಬಂದಿದ್ದ ನರ್ಸ್‌ಗಳು ಇದೀಗ ಕಿರುಕುಳ ತಾಳಲಾರದೇ ಪ್ರಾಣವನ್ನೇ ಬಿಡುವ ಆಲೋಚನೆಗೆ ಬಂದಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ತಮಗಾಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಸ್ಟಾಫ್ ನರ್ಸ್ ಒಂದು ಕಡೆ.. ಮತ್ತೊಂದೆಡೆ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಪ್ರಾಥಮಿಕ ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಸಿಬ್ಬಂದಿ. ಹೌದು! ಹುಬ್ಬಳ್ಳಿಯ ಕಿಮ್ಸ್ ಎದುರು ಹೀಗೆ ಇವರೆಲ್ಲ ಧ್ವನಿ ಎತ್ತುತ್ತಿರುವುದು ಮೇಲಾಧಿಕಾರಿಗಳ ಕಿರುಕುಳದ ವಿರುದ್ಧ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರುಕುಳದ್ದೇ ಕಾರುಬಾರು. ಪಿಎಚ್‌ಸಿಯಲ್ಲಿರುವ ಆರೋಗ್ಯ ವೈದ್ಯಾಧಿಕಾರಿಯೊಬ್ಬರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ಬೇಸತ್ತಿದ್ದ ಹಿರಿಯ ಸಹಾಯಕ ಸಿಬ್ಬಂದಿ ಮೆಹಬೂಬ್ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆಂದು ಡಿಎಚ್‌ಓ ಮತ್ತು ಟಿಎಚ್ಓ ಅವರಿಗೆ ದೂರು ಕೊಟ್ಟಿದ್ದರೂ ವಿಚಾರಣೆ ಮಾಡಲಿಲ್ಲ. ದೂರು ಕೊಟ್ಟ ನಂತರವೂ ಇನ್ನಷ್ಟು ಕಿರುಕುಳ ಜಾಸ್ತಿಯಾಗಿದೆ ಎಂದು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದು ತಮ್ಮ ಸಾವಿಗೆ ವೈದ್ಯಾಧಿಕಾರಿಯೇ ಕಾರಣ ಎಂದು ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅದೃಷ್ಟಾವಶಾತ್ ಸದ್ಯ ಕಿಮ್ಸ್‌ನಲ್ಲಿ ಸಾವು ಬದುಕಿನ ಮಧ್ಯೆ ಮೆಹಬೂಬ್ ಹೋರಾಡುತ್ತಿದ್ದಾನೆ.
ಇದೊಂದು ಘಟನೆಯಾದರೆ ಮೊನ್ನೆಯಷ್ಟೇ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪಿಎಚ್‌ಸಿಯಲ್ಲಿ ಮಹಿಳಾ ಶುಶ್ರೂಷಕಿಯೊಬ್ಬರು ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕಮಲಾ ನಾಗೇಶ್ವರರಾವ್ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಕಮಲಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಇವರೂ ಕೂಡ ತಮ್ಮ ಸಾವಿಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಈ ಎಲ್ಲ ಬೆಳವಣಿಗೆ ಬಗ್ಗೆ ಡಿಎಚ್‌ಓ ಡಾ.ಯಶವಂತ ಮದೀನಕರ ಏನು ಹೇಳುತ್ತಾರೆ ಕೇಳೋಣ ಬನ್ನಿ
ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಇಬ್ಬರು ನರ್ಸ್‌ಗಳು ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದು, ಜೀವ ರಕ್ಷಿಸುವವರೇ ತಮ್ಮ ಜೀವ ಚೆಲ್ಲಲು ಮುಂದಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಈ ಬಗ್ಗೆ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಿದೆ.
Kshetra Samachara
21/09/2021 09:43 pm