ಧಾರವಾಡ: ಕೋವಿಡ್ 19 ರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೋವಿಶೀಲ್ಡ್ ಲಸಿಕೆ ಹಾಕುವ 2ನೇ ಹಂತದ ಕಾರ್ಯವು ಫೆಬ್ರವರಿ 8 ರಂದು ಆರಂಭವಾಗಲಿದ್ದು, ಲಸಿಕೆಯನ್ನು ಗೃಹ ಇಲಾಖೆಯ ಪೊಲೀಸ್, ಹೋಂ ಗಾರ್ಡ್ಸ, ಜೈಲು ಸಿಬ್ಬಂದಿ, ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಹೇಳಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಆರೋಗ್ಯ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಶೀಲ್ಡ್ ಲಸಿಕೆಯನ್ನು ಹಾಕಲಾಗಿದ್ದು, ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು, ವೈದ್ಯರು ಸೇರಿದಂತೆ 11,755 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಈಗಾಗಲೇ ನೋಂದಾಯಿತರಾಗಿರುವ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ತಮಗೆ ಎಸ್‍ಎಂಎಸ್ ಅಥವಾ ಆನ್‍ಲೈನ್ ಮಾಹಿತಿ ತಲುಪಿರದಿದ್ದಲ್ಲಿ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
2ನೇ ಹಂತದಲ್ಲಿ ಲಸಿಕಾಕರಣವನ್ನು ಹೋಮ್ ಗಾರ್ಡ್, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ ಸೇರಿ ಒಟ್ಟು 8,770 ಸಿಬ್ಬಂದಿಗೆ ಸೋಮವಾರ (ಫೆ.8)ದಿಂದ ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕಾ ಆಸ್ಪತ್ರೆಗಳು, ಎಸ್‍ಡಿಎಂ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್, ವಿವೇಕಾನಂದ ಆಸ್ಪತ್ರೆ, ಸುಚಿರಾಯು ಆಸ್ಪತ್ರೆಗಳಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತದೆ.
ಕೋವಿಶೀಲ್ಡ್ ಲಸಿಕೆಯ ಬಗೆಗೆ ಯಾವುದೇ ರೀತಿಯ ಆತಂಕ, ಭಯ ಬೇಡ. ಈಗಾಗಲೇ ನೋಂದಾಯಿತರಾಗಿರುವ ಹಾಗೂ ಇಲಾಖೆಗಳಿಂದ ಕಳುಹಿಸಿರುವ ಸಿಬ್ಬಂದಿ, ಅಧಿಕಾರಿಗಳು ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
Kshetra Samachara
06/02/2021 11:34 pm