ಹುಬ್ಬಳ್ಳಿ: ಕೊರೋನಾ ವೈರಸ್ ಬಂದಿದ್ದೇ ಬಂದಿದ್ದು,ಎಲ್ಲ ಕ್ಷೇತ್ರದಲ್ಲಿಯೂ ಕೂಡ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ವೈದ್ಯಕೀಯ ಕ್ಷೇತ್ರದಲ್ಲಿಂತೂ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ.
ಅಲ್ಲದೇ ಅತ್ಯಂತ ಮಹತ್ವದ ವೈದ್ಯಕೀಯ ಸೇವೆಗೆ ಕೊರೋನಾ ಕರಿ ನೆರಳು ಬಿದ್ದಿದೆ.
ಅಂಗ ವೈಫಲ್ಯದ ರೋಗಿಗೆ ಅಂಗಾಂಗ ಜೋಡಣೆಯ ಮೂಲಕ ಮತ್ತೊಂದು ಜೀವ ಉಳಿಸುವ ಮಹತ್ವಪೂರ್ಣ ವೈದ್ಯಕೀಯ ಸೇವೆಯಾಗಿರುವ ಅಂಗಾಂಗ ಜೋಡಣೆ ಹಾಗೂ ಅಂಗಾಂಗ ದಾನಕ್ಕೆ ಕೊರೋನಾ ಕರಿ ನೆರಳು ಬಿದ್ದಿದ್ದು,ಲಾಕ್ ಡೌನ್ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಇಳಿಕೆ ಕಂಡಿದೆ.
ಕೊರೋನಾ ಸಂದರ್ಭದಲ್ಲಿ ಅಂಗಾಂಗ ದಾನಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ.ಅಲ್ಲದೇ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಮಾಹಿತಿ ಕೊರತೆ ಎದ್ದು ಕಾಣುತ್ತಿದ್ದು,ಅಂಗಾಂಗ ದಾನಕ್ಕೆ ಜನರು ಮಾತ್ರ ಮುಂದೆ ಬರುತ್ತಿಲ್ಲ.
ಮೆದುಳು ನಿಷ್ಕ್ರಿಯಗೊಂಡ ರೋಗಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಜೀವದಾನ ಮಾಡಬಹುದಾಗಿದ್ದು,ಮಾಹಿತಿ ಕೊರತೆಯಿಂದ ಮತ್ತೊಂದು ಜೀವ ಉಳಿಸಬೇಕಿದ್ದ ಜೀವ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದೆ.
ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಅದೆಷ್ಟೋ ಜನರು ಅಂಗಾಂಗ ವೈಫಲ್ಯದಿಂದ ಬಳಲುತ್ತ ಸರಿಯಾದ ಅಂಗಾಂಗ ಸಿಗದೇ ಸಾವನ್ನಪ್ಪುತ್ತಿದ್ದಾರೆ.
ಮೂತ್ರಪಿಂಡ ಸೇರಿದಂತೆ ಬಹುತೇಕ ಅಂಗಾಂಗಗಳು ತುರ್ತು ಸಂದರ್ಭದಲ್ಲಿ ದೊರೆಯದೇ ಇರುವುದರಿಂದ ಸಾವನ್ನಪ್ಪುತ್ತಿದ್ದಾರೆ.
ಒಂದು ಲಕ್ಷ ಜನರಲ್ಲಿ 150ಕ್ಕೂ ಹೆಚ್ಚು ಜನರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಮೆದುಳು ನಿಷ್ಕ್ರಿಯಗೊಂಡಿರುವ ಹಾಗೂ ಯಾವುದೇ ವ್ಯಕ್ತಿಗಳು ಅಂಗಾಂಗ ದಾನಕ್ಕೆ ಮುಂದಾದಲ್ಲಿ ಮತ್ತೊಂದು ಜೀವಕ್ಕೆ ಪುನರುಜ್ಜೀವನ ನೀಡಿದಂತಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
Kshetra Samachara
22/10/2020 05:14 pm