ಕುಂದಗೋಳ: ನಿನ್ನೆ ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ಎಸಿಪಿ ಮಲ್ಲನಗೌಡ ಶೇಖರಗೌಡ (55) ಹೊಸಮನಿಯವರ ಅಂತ್ಯಕ್ರಿಯೆ ಇಂದು ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಮೂಲತಃ ಹಿರೇಹರಕುಣಿ ಗ್ರಾಮದ ಕೃಷಿ ಕುಟುಂಬದ ಮಲ್ಲನಗೌಡರ ಶೇಖರಗೌಡ ಹೊಸಮನಿ ಅವರು ಹುಬ್ಬಳ್ಳಿ ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ದಕ್ಷ ಆಡಳಿತ ಹಾಗೂ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಇತ್ತಿಚೆಗೆ ಲೋಕಾಯುಕ್ತಕ್ಕೆ ವರ್ಗಾವಣೆ ಆಗಿದ್ದರು.
ನಿನ್ನೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸುವ ವೇಳೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು, ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹಿರೇಹರಕುಣಿ ಕಾಮನ ಬಯಲನಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಜಿಟಿ ಜಿಟಿ ಸುರಿಯುವ ಮಳೆಯ ನಡುವೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗೌರವ ಸಲ್ಲಿಸಿದ ಬಳಿಕ ಮೃತರ ಕುಟುಂಬಕ್ಕೆ ಸೇರಿದ ತೋಟದ ಜಾಗದಲ್ಲಿ ಅಂತ್ಯಕ್ರಿಯೆ ಸಿದ್ಧತೆ ಕೈಗೊಳ್ಳಲಾಗಿತ್ತು.
ಕುಂದಗೋಳ ತಾಲೂಕಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ವಿವಿಧ ಪಕ್ಷದ ಮುಖಂಡರು ಪೊಲೀಸ್ ಅಧಿಕಾರಿಗಳು ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದರು.
Kshetra Samachara
18/07/2022 06:07 pm