ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಕೋಗಿಲಗೇರಿ ಗ್ರಾಮಸ್ಥರ ಸಹಕಾರ ಮರೆಯಲಾಗದು'

ಧಾರವಾಡ: ಸರ್ಕಾರದ ಮಾರ್ಗದರ್ಶನದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಅನುವಾಗುವಂತೆ ರೂಪುಗೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಲು ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದ ಜನ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಇಂದು ಸಂಜೆ ಅವರು ಕೋಗಿಲಗೇರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಇಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಧಾರವಾಡದ ಕಲಕೇರಿ ಗ್ರಾಮದಲ್ಲಿ ಸಾರ್ವಜನಿಕರಿಂದ 72 ಅಹವಾಲುಗಳನ್ನು ಸ್ವೀಕರಿಸಿದ್ದು, 12 ಅರ್ಜಿ ಇತ್ಯರ್ಥಗೋಳಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ್ದ 90 ಅರ್ಜಿಗಳ ಪೈಕಿ 26 ಅರ್ಜಿ ಇತ್ಯರ್ಥವಾಗಿವೆ. ಹುಬ್ಬಳ್ಳಿ ನಗರ ತಾಲೂಕಿನ ಗೋಕುಲ ಗ್ರಾಮದಲ್ಲಿ 33 ಅರ್ಜಿ ಸ್ವೀಕರಿಸಿದ್ದು, 20 ಇತ್ಯರ್ಥವಾಗಿವೆ.

ಕುಂದಗೋಳ ತಾಲೂಕಿನ ಗುಡನಕಟ್ಟಿ ಗ್ರಾಮದಲ್ಲಿ 157 ಸ್ವೀಕೃತ ಅರ್ಜಿಗಳ ಪೈಕಿ 9 ಅರ್ಜಿಗಳು ಇತ್ಯರ್ಥವಾಗಿವೆ.

ಕಲಘಟಗಿ ತಾಲೂಕಿನ ಶಿಗ್ಗನಹಳ್ಳಿ ಗ್ರಾಮದಲ್ಲಿ 16 ಅರ್ಜಿಗಳ ಪೈಕಿ ಎಲ್ಲ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ. ನವಲಗುಂದ ತಾಲೂಕಿನ ಕುಮಾರಕೊಪ್ಪ ಗ್ರಾಮದಲ್ಲಿ 21 ಅರ್ಜಿಗಳನ್ನು ಸ್ವೀಕರಿಸಿ, 17 ಇತ್ಯರ್ಥಗೊಳಿಸಲಾಗಿದೆ. ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದಲ್ಲಿ 110 ಅರ್ಜಿಗಳು ಸ್ವೀಕೃತವಾಗಿದ್ದು ಎಲ್ಲ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ.

ತಾವು ಗ್ರಾಮ ವಾಸ್ತವ್ಯ ಮಾಡಿರುವ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 156 ಅರ್ಜಿಗಳು ಸ್ವಿಕೃತವಾಗಿದ್ದು, 102 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ.

ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ಇತ್ಯರ್ಥಪಡಿಸಬಹುದಾದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕ್ರಮ ವಹಿಸಲಾಗಿದೆ. ಮತ್ತು ರಾಜ್ಯ ಹಾಗೂ ಆಯಾ ಇಲಾಖೆ ಹಂತದಲ್ಲಿ ತೀರ್ಮಾನಿಸಬೇಕಾದ ಅರ್ಜಿಗಳ ಕುರಿತು ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿ, ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಕೋಗಿಲಗೇರಿ ಗ್ರಾಮಸ್ಥರ ಬೇಡಿಕೆಯಂತೆ 2 ಎಕರೆ ಭೂಮಿಯನ್ನು ಸಾರ್ವಜನಿಕ ರುದ್ರ ಭೂಮಿಗೆ ಮಂಜೂರು ಮಾಡಿ, ಅಳತೆ ಮಾಡಿಸಿ, ಸ್ಥಳದಲ್ಲಿಯೇ ಇಂದು ಮಂಜೂರಾತಿ ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಪಿಂಚಣಿ ಹಾಗೂ ಇತರ ಸೌಲಭ್ಯಗಳ ಆದೇಶ ಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ತಹಶೀಲ್ದಾರ ಅಮರೇಶ ಪಮ್ಮಾರ, ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಘಾಟೀನ ಸೇರಿದಂತೆ ತಾಲೂಕಾ ಪಂಚಾಯತ ಸದಸ್ಯರು, ಅರವಟಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

20/02/2021 10:24 pm

Cinque Terre

44.67 K

Cinque Terre

0

ಸಂಬಂಧಿತ ಸುದ್ದಿ