ಹುಬ್ಬಳ್ಳಿ: ಒಂದು ಕಡೆ ನೌಕರರಿಗೆ ವೇತನ ನೀಡಲು ಆಗದ ಸ್ಥಿತಿ. ಮತ್ತೊಂದು ಕಡೆ ನಿವೃತ್ತ ನೌಕರರಿಗೆ ಕೊಡಲಿಕ್ಕೆ ಪಿಂಚಣಿ ಹಣವು ಇಲ್ಲದೆ ಪರದಾಟ. ಮಗದೊಂದು ಕಡೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಂಸ್ಥೆಯ ಆಸ್ತಿಗಳನ್ನ ಅಡವಿಡುತ್ತಿರುವ ಸಂಸ್ಥೆ. ಹೀಗೆ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿ ಸರ್ಕಸ್ ಮಾಡ್ತಾ ಇರೋದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ...
ಪ್ರತಿನಿತ್ಯ ಒಂದೂವರೆ ಕೋಟಿ ನಷ್ಟ ಅನುಭವಿಸುತ್ತಿರುವ ವಾಯುವ್ಯ ಸಾರಿಗೆ ಸಿಬ್ಬಂದಿಗಳಿಗೆ ವೇತನ ನೀಡಲು ಆಗದ ಸ್ಥಿತಿಯಲ್ಲಿದೆ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಸ್ಥೆಯ ಆಸ್ತಿಗಳನ್ನ ಅಡವಿಟ್ಟು ನೂರಾರು ಕೋಟಿ ಸಾಲ ಪಡೆಯಲು ಮುಂದಾಗಿದೆ. ಇಷ್ಟಾದ್ರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗದಿದ್ದಾಗ, ಈಗ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ವಾಯುವ್ಯ ಸಾರಿಗೆ ಮುಂದಾಗಿದೆ. ಪ್ರತಿನಿತ್ಯ ಡಿಸೇಲ್ ದರ ಹೆಚ್ಚಳವಾಗುತ್ತಿದ್ದು, ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿರುವ ಅಧಿಕಾರಿಗಳು, ಟಿಕೆಟ್ ದರ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.
ಈಗಾಗಲೇ ಕೋವಿಡ್ ಹೊಡೆತಕ್ಕೆ ದಾರಿ ತಪ್ಪಿರುವ ಜನಸಾಮಾನ್ಯರ ಬದುಕು ಇನ್ನೂ ಸರಿ ದಾರಿಗೆ ಬಂದಿಲ್ಲ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲಯಕಿರುವ ಜನರಿಗೆ ಮತ್ತೆ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಮುಂದಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಸರಕಾರ ಬಸ್ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ವಾಯುವ್ಯ ಸಾರಿಗೆ ಟಿಕೆಟ್ ದರ ಹೆಚ್ಚಳ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸರಕಾರಕ್ಕೆ ಜನರು ಆಗ್ರಹಿಸಿದ್ದಾರೆ.
ವಾಯುವ್ಯ ಸಾರಿಗೆ ಅಧಿಕಾರಿಗಳು ಆರ್ಥಿಕ ಸಂಕಷ್ಟದಿಂದ ಬಚಾವಾಗಲು ಸರ್ಕಸ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೋವಿಡ್ ನಿಂದ ಜರ್ಜರಿತವಾಗಿರುವ ಜನಸಾಮಾನ್ಯರ ಜೋಬಿಗೆ ಈಗ ಕತ್ತರಿ ಹಾಕಿ ಬಸ್ ಟಿಕೆಟ್ ದರ ಹೆಚ್ಚಿಸಲು ಮುಂದಾಗುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ....!
Kshetra Samachara
16/02/2021 11:39 am