ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಮಂಡಿಸಿರುವ ಬಜೆಟ್-2021 ಉತ್ತಮವಾದ ಹಾಗೂ ಸಮತೋಲನ ಕಾಪಾಡಿಕೊಳ್ಳುವ ಗುಣಮಟ್ಟದ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಹೇಳಿದರು.
ನಗರದಲ್ಲಿಂದು ಬಜೆಟ್ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ದೇಶದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ 75 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದೆ.43.36 ಲಕ್ಷ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿರುವುದು ಸ್ವಾಗತಾರ್ಹವಾಗಿದೆ ಎಂದರು.
ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುವ ಸಮಯದಲ್ಲಿ ಘೋಷಿಸಿರುವುದು ಹಿರಿಯ ನಾಗರಿಕರಿಗೆ ನೀಡಿರುವ ಕೊಡುಗೆಯಾಗಿದೆ ಎಂದು ಅವರು ಹೇಳಿದರು.
ಕನಿಷ್ಠ ಬೆಂಬಲ ಬೆಲೆ ನೀತಿಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆಯಾಗಿದ್ದು, ಬೆಳೆ ಉತ್ಪಾದನಾ ವೆಚ್ಚದ ಶೇ.150ರಷ್ಟಕ್ಕೆ ಹೆಚ್ಚಿಸಲಾಗಿದೆ.ಕೃಷಿಗೆ 2013ರ ಸಾಲಿನ ಬಜೆಟ್ನಲ್ಲಿ 33,874 ಕೋಟಿ ಅನುದಾನ, 2019-20ರಲ್ಲಿ 62,802 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಕೃಷಿಯ ಸಮಗ್ರ ಬದಲಾವಣೆಗೆ ಹೆಚ್ಚು ಒತ್ತು ಕೊಟ್ಟಿರುವ ಕೇಂದ್ರ, ಈ ಹಿಂದಿಗಿಂತಲೂ ಹೆಚ್ಚು (75,060 ಕೋಟಿ) ಅನುದಾನ ಘೋಷಿಸುವ ಮೂಲಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಮುಂದಾಗಿದೆ.2019-20ರ ಬಜೆಟ್ನಲ್ಲಿ 35.57 ಲಕ್ಷ ರೈತ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದರು. ಈ ಬಾರಿ ಫಲಾನುಭವಿಗಳ ಸಂಖ್ಯೆಯಲ್ಲೂ ಹೆಚ್ಚಾಗಿದ್ದು, 43.36 ರೈತರು ಈ ಅನುದಾನದ ಸದುಪಯೋಗಕ್ಕೆ ಒಳಗಾಗಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
Kshetra Samachara
01/02/2021 02:16 pm