ಹುಬ್ಬಳ್ಳಿ: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ, ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಇಂದು ಪೊಲೀಸರ ಸರ್ಪಗಾವಲಿನಲ್ಲಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು.
ನಗರದ ಈದ್ಗಾ ಮೈದಾನದಿಂದ ಬೆಳಗ್ಗೆ 11.30 ರ ಸುಮಾರಿಗೆ ನೂರಾರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಮೂರ್ತಿ ಮೆರವಣಿಗೆ ಆರಂಭವಾಯಿತು. ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತ ಮಾರ್ಗವಾಗಿ ಯಾವುದೇ ಪಾಶ್ಚಾತ್ಯ ಸಂಸ್ಕೃತಿ ವಾದ್ಯಗಳಿಗೆ ಮಾರು ಹೋಗದೇ, ಕೇವಲ ದೇಶಿಯ ಹಿಂದೂ ಸಂಪ್ರದಾಯದ ವಾದ್ಯಮೇಳದೊಂದಿಗೆ ಮೆರವಣಿಗೆ ಸಾಗಿತು. ಗಾಜಿನ ಮನೆ ಹಿಂಭಾಗದಲ್ಲಿರುವ ಗಣೇಶ ಬಾವಿಯಲ್ಲಿ ವಿಘ್ನೇಶ್ವರನಿಗೆ ವಿದಾಯ ಹೇಳಲಾಯಿತು.
ಇನ್ನು ಮೂರು ದಿನಗಳವರೆಗೆ ಶಾಂತಿ ಸೌಹಾರ್ದತೆಯಿಂದ ನಡೆದ ಗಣೇಶೋತ್ಸವಕ್ಕೆ ಹಲವಾರು ಗಣ್ಯಾತಿಗಣ್ಯರು ಸಾಕ್ಷಿಯಾದರು. ಇಂದು ಸಹ ಯಾವುದೇ ಅಡೆತಡೆ ಆಗದಂತೆ ಪೋಲಿಸ್ ಇಲಾಖೆಯಿಂದ ಸರ್ಪಗಾವಲು ಹಾಕುವ ಮೂಲಕ ಈದ್ಗಾ ಮೈದಾನದಿಂದ ಇಂದಿರಾ ಗಾಜಿನ ಮನೆಯ ಪಕ್ಕದಲ್ಲಿರುವ ವಿಸರ್ಜನೆ ಬಾವಿವರೆಗೆ ಹದ್ದಿನ ಕಣ್ಣು ಇರಿಸಲಾಗಿತ್ತು.
ವಿಸರ್ಜನೆ ಮೆರವಣಿಗೆ ಉದ್ದಕ್ಕೂ ವಿವಿಧ ಕಲಾತಂಡಗಳು ವಾದ್ಯಗಳನ್ನು ನುಡಿಸುವ ಮೂಲಕ ವಿಸರ್ಜನೆ ಕಾರ್ಯಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟವು. ನಾಸಿಕ್ ಡೋಲ್, ಜಾಂಝ್ ಮೇಳಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆಜ್ಜೆ ಹಾಕಿದ್ದು, ನೋಡುಗರ ಗಮನ ಸೆಳೆಯಿತು.
Kshetra Samachara
02/09/2022 06:42 pm