ಹುಬ್ಬಳ್ಳಿ: ಆ ಯುವತಿ ತನ್ನ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲದೆ ವಾಣಿಜ್ಯನಗರಿ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಆ ಯುವತಿಯ ಸಾಧನೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ಹಾಗಿದ್ದರೆ ಯಾರು ಆ ಯುವತಿ? ಅವರು ಮಾಡಿದ ಸಾಧನೆಯಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ನಿವಾಸಿ, ನಿವೃತ್ತ ರೈಲ್ವೆ ಗಾರ್ಡ್‌ನ ಪುತ್ರಿ ತಹಸೀನ್‌ಭಾನು ದವಡಿ 923 ಅಂಕ ಪಡೆದು 482ನೇ ರ್‍ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಸೌಥ್ ವೆಸ್ಟರ್ನ್ ರೈಲ್ವೆ ಹುಮನ್ ವೇಲಫೇರ್ ಆರ್ಗನೈಸೇಷನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಹಸೀನ್‌ಭಾನು, ಪ್ರೌಢ ಶಿಕ್ಷಣವನ್ನು ಫಾತೀಮಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ವಿದ್ಯಾನಗರದ ವಿದ್ಯಾನಿಕೇತನದಲ್ಲಿ ಪಿಯುಸಿ ಶಿಕ್ಷಣ, ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪಡೆದು, ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರ್ಕಾರ ವತಿಯಿಂದ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಇಂತಹ ಮಹತ್ವದ ಸಾಧನೆ ಮಾಡಿದ್ದಾರೆ.
ಇನ್ನೂ ಪ್ರಥಮ ಬಾರಿಗೆ 2019 ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಅವರು, ಎರಡನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್‌ನೊಂದಿಗೆ ಯಶಸ್ಸು ಸಾಧಿಸಿದ್ದಾರೆ. 2022ರ ಲೋಕಸೇವಾ ಆಯೋಗವು ದೇಶಾದ್ಯಂತ 620 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 482ನೇ ರ್‍ಯಾಂಕ್ ನೊಂದಿಗೆ ಕರ್ನಾಟಕದಲ್ಲಿ ಆಯ್ಕೆಯಾದವರಲ್ಲಿ ಇವರೂ ಒಬ್ಬರು. ತಹಸೀನ್‌ಭಾನು ದವಡಿ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಖಾದರಭಾಷಾ ವೃತ್ತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿದ್ದರು. ತಾಯಿ ಹಸೀನಾ ಬೇಗಂ ಗೃಹಿಣಿ. ಇಂದು ತಹಸೀನ್‌ಭಾನು ದವಡಿ ಯುಪಿಎಸ್‌ಸಿಯಲ್ಲಿ ಆಯ್ಕೆಯಾಗಿ ಮೊದಲ ಬಾರಿಗೆ ತವರೂರಿಗೆ ಆಗಮಿಸಿದರು. ಈ ವೇಳೆ ಕುಟುಂಬಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪಾಲಕರು ತಮ್ಮ ಮಗಳ ಸಾಧನೆ ಮೆಚ್ಚಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಒಟ್ಟಿನಲ್ಲಿ ಕಷ್ಟದ ಸಂದರ್ಭದಲ್ಲಿಯೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹೆತ್ತವರೇ ನನಗೆ ಪ್ರೇರಣೆ. ಪ್ರತಿನಿತ್ಯ ಸತತ ಪರೀಕ್ಷಾ ಪೂರ್ವ ತಯಾರಿ ನಡೆಸುತ್ತಿದ್ದೆ. ಕೇವಲ ಓದು ಮಾತ್ರವಲ್ಲ, ಅದರ ಜೊತೆಗೆ ಸಾಮಾಜಿಕ ಜ್ಞಾನ ನನಗೆ ಸಹಕಾರಿಯಾಯಿತು. ಶೈಕ್ಷಣಿಕ ವಿಭಾಗದಲ್ಲಿ ಕೆಲಸ ಮಾಡುವ ಹಂಬಲ ಹೊಂದಿದ್ದೇನೆ ಅಂತ ತಹಸೀನ್‌ಭಾನು ದವಡಿ ತಿಳಿಸಿದ್ದು, ಇವರ ಸಾಧನೆ ಆಕಾಶದೆತ್ತರಕ್ಕೆ ಬೆಳೆಯಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2022 08:22 pm