ಕುಂದಗೋಳ : ‘ಸರ್ಕಾರದ ರಜೆರಹಿತ ‘ಜಗದ್ಗುರು ರೇಣುಕಾಚಾರ್ಯ ಜಯಂತಿ’ಯನ್ನು ಅಧಿಕೃತವಾಗಿ ಘೋಷಿಸಬೇಕು. ಸಮುದಾಯದ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಬೇಕು ಎಂದು ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ ಹಿರೇಮಠ ಹೇಳಿದರು.
ಅವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಶ್ರೀ ಫಕೀರೇಶ್ವರ ಮಠದಲ್ಲಿ ಶ್ರೀ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.
ಬೇಡ ಜಂಗಮ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ನಾವೆಲ್ಲರೂ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.
ಕುಂದಗೋಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಬಿ.ಉಪ್ಪಿನ ಮಾತನಾಡಿ, ಶಿವಾದ್ವೈತ ಸಿದ್ಧಾಂತ ಪ್ರತಿಪಾದಿಸಿದ ಮಹಾಗುರು ರೇಣುಕಾಚಾರ್ಯರು ಸಮಾಜದ ಏಳಿಗೆಗೆ ವಿಶಿಷ್ಟ ಕೊಡುಗೆ ನೀಡಿದ್ದು, ಅವರ ತತ್ವಾದರ್ಶಗಳು ನಮಗೆಲ್ಲ ದಾರಿದೀಪವಾಗಿವೆ ಎಂದರು.
ಗ್ರಾ.ಪಂ ಮಾಜಿ ಸದಸ್ಯ ಮುತ್ತಣ್ಣ ಜಡಿಮಠ ಮಾತನಾಡಿ, ಮಾರ್ಗದರ್ಶನದಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಾತಿ ಪ್ರಮಾಣ ಪತ್ರ ನೀಡದೇ ನೆಪವೊಡ್ಡುತ್ತಿದ್ದಾರೆ. ನ್ಯಾಯಾಲಯ ಮತ್ತು ಸರಕಾರಗಳ ಆದೇಶಕ್ಕೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ತಹಸೀಲ್ದಾರ್ ಅವರಿಗೆ ಬೇಡ ಜಂಗಮ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಲು ಒತ್ತಾಯಿಸಿದರು.
ಜಂಗಮ ಬಂಧುಗಳೆಲ್ಲರೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಅನ್ನದಾನೇಶ್ವರ ಕುಂದಗೋಳಮಠ, ಎಸ್.ಬಿ.ತಾಳಿಕೋಟಿಮಠ, ಮೃತ್ಯುಂಜಯ ಗಡ್ಡದೇವರಮಠ, ಗ್ರಾ.ಪಂ ಸದಸ್ಯ ರಾಜು ಪುಟ್ಟಣ್ಣವರ, ಎಂ.ಎಸ್.ಹಿರೇಮಠ, ಶಿವಯೋಗಿ ಜಡಿಮಠ, ಚಂದ್ರಶೇಖರಯ್ಯ ಚಿಕ್ಕಮಠ, ಶಿವಯೋಗಿ ಹಿರೇಮಠ, ಸಿದ್ರಾಮಯ್ಯ ಚಿಕ್ಕಮಠ, ಬಸಯ್ಯ ಹಿರೇಮಠ, ಚಂದ್ರ ಕುಂದಗೋಳಮಠ, ಕುಮಾರ್ ಹಿರೇಮಠ, ವೀರೇಶ ಹಿರೇಮಠ, ಕಲ್ಲಯ್ಯ ಮಠಪತಿ, ಚಂದ್ರಶೇಖರ ಹಿರೇಮಠ, ಜೆ.ಎಂ.ಹಿರೇಮಠ ಹಾಗೂ ಜಂಗಮ ಬಾಂಧವರು ಉಪಸ್ಥಿತರಿದ್ದರು.
Kshetra Samachara
16/03/2022 11:36 am