ಧಾರವಾಡ: ಹಿರಿಯ ಚಿತ್ರ ಕಲಾವಿದ ಬಿ.ಮಾರುತಿ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ನಿಸರ್ಗದ ವಿಭಿನ್ನ ದೃಶ್ಯಗಳು ಸಹಜವಾಗಿ ಅನಾವರಣಗೊಂಡಿವೆ ಎಂದು ಕನ್ನಡ ಪತ್ರಿಕೋದ್ಯಮದ ಪಾರಂಪರಿಕ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಅಭಿಪ್ರಾಯಪಟ್ಟರು.
ಧಾರವಾಡದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಅವರ ಏಕವ್ಯಕ್ತಿ ಚಿತ್ರಕಲಾಕೃತಿಗಳ ಪ್ರದರ್ಶನ ವೀಕ್ಷಿಸಿದ ನಂತರ ಅವರು ಮಾತನಾಡಿದರು.
ಸೂರ್ಯೋದಯ, ಗುಡ್ಡದ ಇಳಿಜಾರಿನಿಂದ ಧುಮುಕುತ್ತಿರುವ ನೀರು, ರಭಸದಿಂದ ಬರುವ ಸಮುದ್ರದ ತೆರೆಗಳ ನೋಟ, ಹಸಿರು ಕಾಡು, ನೀಲಾಕಾಶದಲ್ಲಿ ಬಣ್ಣಗಳ ಚಿತ್ತಾರ, ದಟ್ಟ ಕಾಡಿನಲ್ಲಿ ಒಳನುಗ್ಗಿದ ಸೂರ್ಯ ರಶ್ಮಿಗಳು, ಸೂರ್ಯಾಸ್ತದ ಮುಸ್ಸಂಜೆ ಇವೇ ಮುಂತಾದ ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಸುಮಾರು 60ಕ್ಕೂ ಹೆಚ್ಚು ಕಲಾಕೃತಿಗಳಲ್ಲಿ ಕುಂಚದ ಕಲಾ ಕೈಚೆಳಕದಿಂದ ಹಿಡಿದಿಡುವಲ್ಲಿ ಬಿ. ಮಾರುತಿ ಯಶಸ್ವಿಯಾಗಿದ್ದಾರೆ ಎಂದು ಡಾ.ಯರಗಂಬಳಿಮಠ ಪ್ರಶಂಸೆ ವ್ಯಕ್ತಪಡಿಸಿದರು.
ಅಭಿನಯ ಭಾರತಿಯ ಮುಖ್ಯಸ್ಥ ಅರವಿಂದ, ಲೇಖಕ ರಾಜು ಭೂಶೆಟ್ಟಿ, ಅಶೋಕ ಮೊಖಾಸಿ, ಚಿತ್ರಕಲಾ ಅಧ್ಯಾಪಕ ಎಸ್.ಕೆ. ಪತ್ತಾರ ಇತರರು ಇದ್ದರು.
Kshetra Samachara
10/01/2022 09:26 pm