ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಕೊರೊನಾ ಅಲೆ ಅಬ್ಬರ ತಗ್ಗಿದ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಸೋಂಕಿನ ಹಿನ್ನೆಲೆ ನಿಂತು ಹೋಗಿದ್ದ ಅನೇಕ ಕಲಾ ಚಟುವಟಿಕೆಗಳು ಈಗ ಮತ್ತೆ ಗರಿಗೆದರಲಾರಂಭಿಸಿವೆ. ಅಂತಹ ಒಂದು ಚಟುಟಿಕೆಯ ವರದಿ ಇಲ್ಲಿದೆ ನೋಡಿ.
ಕುಂಚ ಹಿಡಿದ ಕೈಗಳಿಂದ ಕ್ಯಾನ್‌ವಾಸ್ ಮೇಲೆ ಮೂಡುತ್ತಿರುವ ಅಂದದ ಚಿತ್ತಾರ. ಒಂದೆಡೆ ರಾಷ್ಟ್ರನಾಯಕರ, ರಾಷ್ಟ್ರ ನಾಯಕಿಯರ ಮುಖಮುದ್ರಿಕೆ.. ಮತ್ತೊಂದೆಡೆ ಕಣ್ಮನ ಸೆಳೆಯುವ ಕಾಲ್ಪನಿಕ ಚಿತ್ರಗಳ ಅನಾವರಣ. ಇದು ಧಾರವಾಡದ ರಂಗಾಯಣ ಆವರಣದಲ್ಲಿ ನಡೆಯುತ್ತಿರುವ "ಕಲಾ ಸಂಕ್ರಾಂತಿ" ಎಂಬ ರಾಷ್ಟ್ರೀಯ ಕಲಾ ಶಿಬಿರದಲ್ಲಿ ಕಂಡು ಬಂದ ದೃಶ್ಯ. ಲೋಕಾಪುರದ ವಿಶ್ವಕರ್ಮ ಆರ್ಟ್ಸ್ ಕ್ರಿಯೇಷನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಿಬಿರಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗವೂ ಇದ್ದು, ಕೇಂದ್ರೀಯ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಶಿಬಿರವೂ ಇದಾಗಿದೆ. ಈ ಕಲಾ ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಅನೇಕ ಹಿರಿಯ, ಕಿರಿಯ ಕಲಾವಿದರು ಚಿತ್ರಗಳನ್ನು ಬಿಡಿಸುತ್ತಿದ್ದು ಇದೇ ವೇಳೆ ಜನರಿಗೆ ವೀಕ್ಷಣೆಗೂ ಅವಕಾಶ ಮಾಡಿಕೊಡಲಾಗಿದೆ.
ಇನ್ನು ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಚಿತ್ರಕಲಾ ಶಿಬಿರ ನಡೆಯುತ್ತಿದ್ದು, ಇದೇ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಮುಖ್ಯವಾಗಿಟ್ಟುಕೊಳ್ಳಲಾಗಿದೆ. ಇದರ ಜೊತೆ ಬಹು ಪ್ರಮುಖವಾಗಿ ಅಂಚೆ ಕುಂಚ ಪ್ರದರ್ಶನವೂ ಇಲ್ಲಿದ್ದು, ಪೋಸ್ಟ್ ಕಾರ್ಡ್‌ನಲ್ಲಿ ಚಿತ್ರ ಬಿಡಿಸಿ ಕಳುಹಿಸಿದ್ದು, ಅಂತಹ 40 ಪೋಸ್ಟ್ ಕಾರ್ಡ್ ಚಿತ್ರಕಲಾ ಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಗಳೇ ಆಗ ಸಂವಹನಕ್ಕಾಗಿದ್ದವು. ಅದನ್ನೇ ಪ್ರತಿಬಿಂಬಿಸುವ ದೃಷ್ಟಿಯಿಂದ ಇದರಲ್ಲೇ ಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳ ಕಲಾವಿದರೂ ಸಹ ತಮ್ಮ ತಮ್ಮ ಮನೆಗಳಿಂದಲೇ ಪೋಸ್ಟ್‌ಕಾರ್ಡ್‌ನಲ್ಲಿ ಕಲಾಕೃತಿಗಳನ್ನು ಕಳುಹಿಸಿದ್ದಾರೆ. ಇನ್ನು ಶಿಬಿರದಲ್ಲೇ, ಉಳಿದ ರಾಜ್ಯದ ಕಲಾವಿದರು ತಮ್ಮ ಕುಂಚದಲ್ಲಿ ಮಹತ್ವದ ಚಿತ್ರಗಳಿಗೆ ರೂಪ ನೀಡುತ್ತಿದ್ದಾರೆ. ಇನ್ನು ಶಿಬಿರ ಮುಗಿದ ಬಳಿಕ ಎರಡು ದಿನಗಳ ವಿಶೇಷ ಪ್ರದರ್ಶನವೂ ನಡೆಯಲಿದೆ.
ಕೊರೊನಾ ಕಡಿಮೆಯಾದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ನಡೆದ ಈ ಕಲಾ ಶಿಬಿರ, ಜನ ಹಾಗೂ ಕಲಾವಿದರು ತಮ್ಮ ಹಳೆಯ ದಿನಗಳಿಗೆ ಮರಳುವಂತೆ ಮಾಡಿದ್ದು ಸುಳ್ಳಲ್ಲ.
Kshetra Samachara
14/11/2021 10:49 am