ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ
ಧಾರವಾಡ: ಸುದೀರ್ಘ 29 ವರ್ಷ ಭಾರತಾಂಬೆಯ ಸೇವೆಗೈದು ಬಂದ ಸಾರ್ಥಕ ಭಾವನೆ.. ಅಪ್ಪನನ್ನು ಕಂಡು ಖುಷಿಪಟ್ಟ ಮಕ್ಕಳು.. ಮಗನನ್ನೂ ಮಿಲಿಟರಿ ಡ್ರೆಸ್‌ನಲ್ಲಿ ಕಂಡು ಖುಷಿಪಟ್ಟ ಯೋಧ.. ಗ್ರಾಮದ ತುಂಬೆಲ್ಲ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆಗಳು.. ಇದೆಲ್ಲ ಕಂಡು ಬಂದದ್ದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ.
ಸುದೀರ್ಘ 29 ವರ್ಷಗಳ ಕಾಲ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್)ನಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಮರಳಿ ಸ್ವಗ್ರಾಮವಾದ ಉಪ್ಪಿನ ಬೆಟಗೇರಿಗೆ ಬಂದ ವೀರಯೋಧ ಅಶೋಕ ವಿಜಾಪುರ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ರೇಣುಕಾ ಯಲ್ಲಮ್ಮನ ದೇವಸ್ಥಾನದಿಂದ ಯೋಧ ಅಶೋಕ ಅವರನ್ನು ಮೆರವಣಿಗೆ ಮೂಲಕ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಯಿತು.
29 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧನಿಗೆ ಅದ್ಧೂರಿ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯ್ತಿ ಹಾಗೂ ವಿದ್ಯಾದಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಇಂದು ದೀಪಾವಳಿ ಹಬ್ಬದ ಅಂಗವಾಗಿ ಶಾಲಾ, ಕಾಲೇಜುಗಳು ರಜೆ ಇದ್ದರೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಶಾಲಾ, ಕಾಲೇಜಿನ ಡ್ರಮ್ ಸೆಟ್ ಜೊತೆಗೆ ಯೋಧ ಅಶೋಕ ಅವರನ್ನು ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಗ್ರಾಮಕ್ಕೆ ಬರ ಮಾಡಿಕೊಂಡರು.
1993ರಲ್ಲಿ ಬಿಎಸ್‌ಎಫ್ ಸೇರಿದ ಅಶೋಕ ಅವರು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ. 29 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಮರಳಿ ಸುರಕ್ಷಿತವಾಗಿ ತಮ್ಮ ಸ್ವಂತ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದ ಹಿರಿಯರು, ಯುವಕರು, ಮಕ್ಕಳು ಅವರನ್ನು ಸ್ವಾಗತ ಕೋರಿದ್ದಕ್ಕೆ ಯೋಧ ಅಶೋಕ ಅವರ ಸಂತಸ ವ್ಯಕ್ತಪಡಿಸಿದರು.
ಯೋಧ ಅಶೋಕ ಅವರು ನಿವೃತ್ತಿ ಹೊಂದಿ ಮನೆಗೆ ಬಂದಿದ್ದಕ್ಕೆ ಅವರ ಪತ್ನಿ ಚೈತ್ರ ಸಂತಸ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ಮಕ್ಕಳನ್ನೂ ಸೇನೆಗೆ ಸೇರಿಸಲಾಗುವುದು ಎಂದರು.
ಒಟ್ಟಾರೆಯಾಗಿ ಸುದೀರ್ಘ 29 ವರ್ಷ ತನ್ನ ತಂದೆ, ತಾಯಿ, ಒಡಹುಟ್ಟಿದವರು, ಹೆಂಡತಿ, ಮಕ್ಕಳು, ಬಂಧು, ಬಳಗ, ಸ್ನೇಹಿತರು ಹಾಗೂ ತನ್ನೂರು ಬಿಟ್ಟು ದೇಶದ ಗಡಿ ಕಾದು ಬಂದ ಭಾರತಾಂಬೆಯ ಹೆಮ್ಮೆಯ ಪುತ್ರ ಅಶೋಕ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು.
Kshetra Samachara
05/11/2021 06:20 pm