ಹುಬ್ಬಳ್ಳಿ:ವಿಶ್ವದ ಮೊದಲ ವ್ಯವಹಾರ ಸಮ್ಮೇಳನ ಎಂದೇ ಖ್ಯಾತಿ ಪಡೆದ ಟೈಕಾನ್ ಸಮಾವೇಶಕ್ಕೆ ಇಂದು ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು. ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಟೈಕಾನ್ ವಿಶ್ವದ ಮೊದಲ ವ್ಯವಹಾರ ಸಮ್ಮೇಳನ ಉತ್ತಮ ರೀತಿಯಲ್ಲಿ ಪ್ರಾರಂಭಗೊಂಡಿತು.
ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಗಳ ಹಿಂದೆಯೂ ಹತ್ತಾರು ಹೋರಾಟದ ಕಥನಗಳಿರುತ್ತವೆ. ಗೆಲುವನ್ನು ಕಂಡವರು, ಲೋಕ ವ್ಯವಹಾರದ ಆಳ-ಅಗಲ ಅರಿತವರು ಮುಂದಿನ ದಿನದ ಬದಲಾವಣೆ, ಅವಶ್ಯಕತೆಗಳ ಕುರಿತು ಸ್ಪಷ್ಟ ಸುಳಿವನ್ನು ಹೊಂದಿರುತ್ತಾರೆ. ಅಂಥವರ ಮಾತು ಕೇಳುವ ಅವಕಾಶವನ್ನು ದಿ ಇಂಡಸ್ ಆಂತರ್‌ಪ್ರಿನರ್ಸ್ (ಟೈ) ಹುಬ್ಬಳ್ಳಿ ಶಾಖೆ ಕಲ್ಪಿಸಿಕೊಡಲು ಸಜ್ಜಾಗಿದೆ.
2012ರಿಂದ ಪ್ರತಿ ವರ್ಷವೂ ಟೈ ಕಾನ್ (ಟೈ ಸಮ್ಮೇಳನ) ಏರ್ಪಡಿಸುತ್ತ ಬಂದಿರುವ ಟೈ, ದೇಶ- ವಿದೇಶಗಳ ಖ್ಯಾತನಾಮ ಸಾಧಕರನ್ನು ಹುಬ್ಬಳ್ಳಿಗೆ ಕರೆಸಿ, ಅವರ ಯಶೋಗಾಥೆಯನ್ನು ಕೇಳುವ, ಅವರೊಂದಿಗೆ ಮುಕ್ತವಾಗಿ ಸಂವಾದ ನಡೆಸುವ ಅವಕಾಶವನ್ನು ಒದಗಿಸಿಕೊಡುತ್ತ ಬಂದಿದೆ. ಅದರಂತೆ ಈ ಸಲ ಟೈ ಯುವ ಸಮ್ಮೇಳನ ಈಗಾಗಲೇ ಜ. 30ರಂದು ಮುಗಿದಿದ್ದು,ಇಂದು ಮಹಿಳಾ ಸಮ್ಮೇಳನದಲ್ಲಿ ಹಲವಾರು ಮಹಿಳಾ ಸಾಧಕರು ಭಾಗವಹಿಸಿದ್ದರು.
ಟೈ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಅಜಯ ಹಂಡಾ, ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ ನಾಡಗೌಡ, ಸಂಯೋಜಕ ವಿಜಯ ಮಾನೆ ಮತ್ತು ಇತರರು ಸಾಕಷ್ಟು ಪರಿಶ್ರಮ ವಹಿಸಿ ಸಮ್ಮೇಳನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು,ಮಹಿಳಾ ಸಮ್ಮೇಳನದಲ್ಲಿ 'ಮಹಿಳೆ ಮತ್ತು ಕನಸುಗಳು' ಕುರಿತು ಫೆಮಿನಾ ಮತ್ತು ಹಲೋ ಮ್ಯಾಜಯಿನ್ ಸಂಪಾದಕಿ ರುಚಿಕಾ ಮೆಹ್ವಾ, 'ಉದ್ಯಮಶೀಲತೆಯಲ್ಲಿ ವೈಭವ ಸಾಧನೆ' ಕುರಿತು ಪಾರ್ಕ್ ಹೋಟೆಲ್ಸ್ ಅಧ್ಯಕ್ಷೆ ಪ್ರಿಯಾ ಪೌಲ್, 'ಪ್ರತಿಕೂಲ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಕುರಿತು ಕ್ರೀಡಾ ಸಾಧಕಿ ಡಾ. ಕೋಮಲ ರಾವ್, 'ನವಭಾರತ ನಿರ್ವಣದಲ್ಲಿ ಮೂಲಸೌಕರ್ಯದ ಪಾತ್ರ' ಕುರಿತು ಬ್ರಿಗೇಡ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ ನಿರುಪಮಾ ಶಂಕರ, 'ಉದ್ಯಮಶೀಲತೆಯಿಂದ ರಾಜಕೀಯಕ್ಕೆ- ನನ್ನ ಕಥೆ' ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.
Kshetra Samachara
27/02/2021 07:55 pm