ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ ದೇಶ ಪ್ರೇಮ ಆಗಾಧವಾದದು. ನುಡಿದಂತೆ ನಡೆದ ಮಹಾನ್ ಸಂತ ಅವರು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಡಿ.ಆರಿ ಹೇಳಿದರು.
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ, ಬಿ.ವ್ಹಿ.ಬಿ ಕಾಲೇಜಿನ ಬಿ.ಟಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರು ದೇಶದ ಉನ್ನತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ, ವಿದೇಶಗಳಲ್ಲಿ ಕೆಲಸ ಅರಸಿ ಹೋಗುತ್ತಾರೆ. ಇದರ ಬದಲು ದೇಶಪ್ರೇಮವನ್ನು ರೂಢಿಸಿಕೊಂಡು ಇಲ್ಲಿಯೇ ಕೆಲಸ ಮಾಡಬೇಕು. ಇದರಿಂದ ದೇಶ ಪ್ರಗತಿಯಾಗುತ್ತದೆ.
ಸಮಾಜವನ್ನು ದೂಷಿಸುವ ಪೂರ್ವದಲ್ಲಿ ನಾವು ನಮ್ಮನ್ನು ಸರಿಪಡಿಸಿಕೊಳ್ಳಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಭ್ರೂಣ ಹತ್ಯೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಮನೆಯಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಯೋಟೆಕ್ ವಿಭಾಗದ ಮುಖ್ಯಸ್ಥ ಡಾ.ಸಂಜಯ ಗೊಠಬಾಗಿ, ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಹಂಚಿಕೊಂಡಷ್ಟು ಜ್ಞಾನ ಸಂಪತ್ತು ಹೆಚ್ಚಾಗುತ್ತದೆ. ಉತ್ತಮ ಮಾಹಿತಿ ನಿಮ್ಮಲ್ಲಿದ್ದರೆ ನಿಮ್ಮ ಆಲೋಚನೆಗಳಿಗೆ ಬೆಲೆ ಬರುತ್ತದೆ. ಸಮಾಜದ ಬದಲಾವಣೆಗೆ ಸರಿಯಾದ ಸಮಯದಲ್ಲಿ ಸ್ಪಂದಿಸಬೇಕು. ನಿರಂತರ ಅಧ್ಯಯನದೊಂದಿಗೆ ನಾಲ್ಕು ವರ್ಷದ ಇಂಜಿನಿಯರಿಂಗ್ ಶಿಕ್ಷಣವನ್ನು ಫಲಪ್ರದವನ್ನಾಗಿಸಿಕೊಳ್ಳಿ ಎಂದರು.
Kshetra Samachara
12/01/2021 02:10 pm