ಹುಬ್ಬಳ್ಳಿ : ಭೂಮಿ ತಾಯಿ ಫಸಲು ಹೊತ್ತು ನಿಂತಿರುವ ಸಮಯ, ಆದರೆ ಪ್ರಸ್ತಕ ವರ್ಷ ಅತಿವೃಷ್ಟಿ ಮತ್ತು ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಸಹ ಭೂತಾಯಿ ಪೂಜೆ ಬಿಡಬಾರದು ಎಂಬ ಉದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿ ಶೀಗಿ ಅಥವಾ ಶೀಗೆ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ.
ಹೌದು..ಧಾರವಾಡ ಜಿಲ್ಲೆಯಲ್ಲಿ ಸಂಭ್ರಮದಿಂದ ಶೀಗಿ ಹುಣ್ಣಿಮೆಯನ್ನು ಆಚರಿಸಿದ್ದಾರೆ. ರೈತರು ಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ, ಜಮೀನಿನಲ್ಲಿ ಪಂಚ ಪಾಂಡವರನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.ಮನೆಯ ಹೆಣ್ಣುಮಕ್ಕಳು ಗರ್ಭವತಿಯಾದಾಗ ಯಾವ ರೀತಿ ವಿವಿಧ ರೀತಿಯ ಭಕ್ಷಭೋಜನಗಳಿಂದ ಸೀಮಂತ ಕಾರ್ಯ ಮಾಡುತ್ತಾರೋ, ಅದೇ ರೀತಿ ಫಸಲು ಹೊತ್ತು ನಿಂತ ಭೂತಾಯಿಗೆ ರೈತ ಭಕ್ಷಭೋಜನಗಳಿಂದ ಸಂತೃಪ್ತಿಗೊಳಿಸುವ ಹಬ್ಬವೇ ಶೀಗೆ ಹುಣ್ಣಿಮೆ.
ಅಲ್ಲದೆ ಯಾವಾಗಲೂ ಭೂಮಿ ತಾಯಿಗೆ ಪೂಜೆ ಸಲ್ಲಿಸುವುದಕ್ಕಿಂತ ಈ ಶೀಗೆ ಹುಣ್ಣಿಮೆಯಲ್ಲಿ ಪೂಜೆ ಸಲ್ಲಿಸುವುದು ತುಂಬಾ ವಿಶೇಷವಾಗಿರುತ್ತದೆ. ಚರಗ ಚೆಲ್ಲುವುದು, ತಾಯಿಗೆ ತಯಾರಿಸಿದ ಭಕ್ಷಭೋನಗಳು ಶೀಗೆ ಹುಣ್ಣಿಮೆಯ ಪ್ರಮುಖ ಆಕರ್ಷಣೆಯಾಗಿತ್ತು. ಈ ಹಬ್ಬಕ್ಕೆ ದೂರ ಸಂಬಂಧಿಕರು, ಬಂಧುಗಳು ಹಾಗೂ ಸ್ನೇಹಿತರು ಜಮೀನುಗಳಿಗೆ ತೆರಳಿ ಭಕ್ಷಭೋಜನ ಸವೆದು ಸಂಭ್ರಮದಿಂದ ಭೂಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ವಿಜಯದಶಮಿಯ ಬಳಿಕ ಬರುವ ಶೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ5 ಬಗೆಯ ಕಾಳು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ. ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮೃದ್ಧವಾಗಿರಲಿದೆ ಎನ್ನುವ ನಂಬಿಕೆ ಜನರಲ್ಲಿದೆ.
Kshetra Samachara
08/10/2022 05:30 pm