ಹುಬ್ಬಳ್ಳಿ:ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಎಸ್.ಎಂ.ಕೃಷ್ಣಾನಗರದ ಸಭಾ ಭವನದಲ್ಲಿಂದು ಗರ್ಭಿಣಿಯರಿಗೆ ಸೀಮಂತ ಕಾರ್ಯ ಹಾಗೂ ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಶಹರ ನಿರೂಪಣಾಧಿಕಾರಿ ಎನ್.ಎ.ಪುಟ್ಟನವರ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಬೈಲೂರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯದ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮತ್ತು ಆಹಾರ ಪದ್ದತಿ ಕುರಿತು ಸಲಹೆ ನೀಡಲಾಯಿತು.ಅಲ್ಲದೆ ಆರು ತಿಂಗಳ ತುಂಬಿದ ಮಕ್ಕಳಲ್ಲಿ ಪೋಷಕಾಂಶಗಳ ವೃದ್ದಿಗಾಗಿ ಅನ್ನಪ್ರಾಶನ ಹಾಗೂ ಬೌದ್ಧಿಕ ಮಟ್ಟದ ವೃದ್ದಿಗಾಗಿ ಪೋಷಕರು ತಮ್ಮ ಮಕ್ಕಳಲ್ಲಿ ವಹಿಸಬೇಕಾದ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
Kshetra Samachara
18/09/2020 10:10 am