ಧಾರವಾಡ: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಿ, ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ನೀಡಲು ಸದಾ ಶ್ರಮಿಸುವ ಪೊಲೀಸ್ ವ್ಯವಸ್ಥೆ ತ್ಯಾಗ, ಬಲಿದಾನದ ಪ್ರತೀಕವಾಗಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಬಿ. ಚಟ್ಟಿ ಹೇಳಿದರು.
ನಗರದ ಪೊಲೀಸ್ ಮೈದಾನದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ಕೊರೊನಾ ವಾರಿಯರ್ಸ್‍ಗಳಾಗಿ ಪೊಲೀಸರು ದುಡಿಯುತ್ತಿದ್ದಾರೆ. ಸಾರ್ವಜನಿಕರ ಹಿತ ಕಾಪಾಡಲು ಸದಾಕಾಲ ದುಡಿಯುತ್ತಾರೆ. ಸಮಾಜ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಸರ್ಕಾರ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಇನ್ನು ಹೆಚ್ಚಿನ ಸೌಕರ್ಯ ಸವಲತ್ತು ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು.
ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಕಳೆದ ಸಾಲಿನಲ್ಲಿ ದೇಶ ಹಾಗೂ ಸಮಾಜದ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡ ದೇಶದ 259 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಹೆಸರು ಸ್ಮರಿಸಿ, ಗೌರವ ಸಲ್ಲಿಸಿದರು. ಧಾರವಾಡ ಎಎಸ್‍ಐಎಸ್‍ಎಫ್ ಕಮಾಂಡೆಂಟ್ ವಿ. ಫೈಜುದ್ದೀನ ಅತಿಥಿಗಳಾಗಿದ್ದರು,ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್ ಸ್ವಾಗತಿಸಿರು. ಡಿಎಆರ್ ವಿಭಾಗದ ಡಿಎಸ್‍ಪಿ ಶಿವಾನಂದ ಜಿ.ಸಿ. ವಂದಿಸಿದರು. ಡಾ.ಎ.ಸಿ. ಅಲ್ಲಯ್ಯನವರಮಠ ಕಾರ್ಯಕ್ರಮ ನಿರೂಪಿಸಿದರು. ಡಿ.ಎ.ಆರ್ ನ ಆರ್.ಪಿ.ಐ. ಜಿ.ಸಿ. ಡೂಗನವರ ನೇತೃತ್ವದಲ್ಲಿ ಪರೇಡ್ ಮೂಲಕ ಗೌರವ ರಕ್ಷೆ ನೀಡಲಾಯಿತು.
Kshetra Samachara
21/10/2020 05:01 pm