ಹುಬ್ಬಳ್ಳಿ: ಅದೊಂದು ಚುನಾಯಿತ ಪ್ರತಿನಿಧಿಯ ಬರ್ಬರ ಕೊಲೆ. ಆ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಕ್ಷಕರಾಗಬೇಕಿದ್ದ ಆರಕ್ಷಕರ ಸುತ್ತವೇ ಈಗ ಬಹುದೊಡ್ಡ ಅನುಮಾನದ ಹುತ್ತ ಬೆಳೆದಿದೆ. ಈ ಬಗ್ಗೆ ಮೃತನ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ಕಮೀಷನರ್ ಕಚೇರಿಯ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಯಾವುದು ಆ ಕೊಲೆ? ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಕಳೆದ ಜುಲೈನಲ್ಲಿ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಟದಾರಿಯ ಹತ್ಯೆಯಾಗಿತ್ತು. ದುಷ್ಕರ್ಮಿಗಳು ಬರ್ಬರವಾಗಿ ಗ್ರಾಪಂ ಸದಸ್ಯನನ್ನು ಹತ್ಯೆ ಮಾಡಿದ್ದರು. ಇದೀಗ ಆ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯ ಹಿಂದೆ ಪೊಲೀಸರ ಕೈವಾಡ ಇದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಆ ಸದಸ್ಯ ಕೊಲೆಯಾಗುವ ಹದಿನೈದು ದಿನ ಮುನ್ನ ಪೊಲೀಸ್ ಅಧಿಕಾರಿ ಮಾಡಿರುವ ಮೆಸೇಜ್ ಇದೀಗ ಆರೋಪಕ್ಕೆ ಪುಷ್ಟಿ ನೀಡಿದ್ದು, ಈಗ ನ್ಯಾಯಕ್ಕಾಗಿ ಮೃತ ದೀಪಕ್ ಕುಟುಂಬ ಪೊಲೀಸ್ ಕಮೀಷನರ್ ಕಚೇರಿಯ ಮೆಟ್ಟಿಲೇರಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕಿದ್ದ ಪೊಲೀಸರು ಹಂತಕರ ಜೊತೆಗೆ ಶಾಮೀಲಾಗಿದ್ದಾರೆ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದು, ದೂರು ಸಹ ನೀಡಿದ್ದಾರೆ.
ಇನ್ನೂ ದೀಪಕ್ ಕೊಲೆ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವರನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಕೊಲೆಗೆ ಕಾರಣವಾದ ಪ್ರಮುಖ ಆರೋಪಿಗಳನ್ನ ಅರೆಸ್ಟ್ ಮಾಡಿಲ್ಲ. ಕೊಲೆ ನಡೆದು ಮೂರು ತಿಂಗಳು ಕಳೆದ್ರೂ ಪ್ರಮುಖ ಆರೋಪಿಗಳು ರಾಜಾರೋಷವಾಗಿ ಓಡಾಡ್ತಿದ್ದಾರೆ. ಆದ್ರೆ ಪೊಲೀಸರು ಅವರನ್ನು ಬಂಧಿಸೋ ಧೈರ್ಯ ಮಾಡ್ತಿಲ್ಲ. ಈ ನಡುವೆ ಪರಶುರಾಮ್ ಕಾಳೆ ಹಾಗೂ ನಾಗಾರಾಜ್ ಕೆಂಚಮ್ಮನವರ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಕೊಟ್ಟ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಸುವ್ಯವಸ್ಥೆ ಡಿಸಿಪಿ ಸೂಕ್ತ ತನಿಖೆಯ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಖಾಕಿಯ ಮೇಲೆಯೇ ಕುಟುಂಬದವರ ಅನುಮಾನ ದಟ್ಟವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಶಿಕ್ಷೆಯಾಗಿ ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.
Kshetra Samachara
17/09/2022 05:24 pm