ಹುಬ್ಬಳ್ಳಿ: ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಗೋಕುಲ ರಸ್ತೆಯ ಶ್ರೀಗಿರಿಯಲಿಂಗ ಮತ್ತು ಅವರ ಪುತ್ರ ಈಶಾನ್ ಅವರನ್ನು ನಂಬಿಸಿದ ವ್ಯಕ್ತಿ, ಆನ್ ಲೈನ್ ನಲ್ಲಿ 21.86 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಯೂಟ್ಯೂಬ್ ನಲ್ಲಿ ಜಾಹೀರಾತು ನೋಡಿದ್ದ ಈಶಾನ್, ಟೆಲಿಗ್ರಾಮ್ ನಲ್ಲಿ ಖಾತೆ ತೆರೆದು ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಲಾಭವಾಗಿದ್ದರಿಂದ ಕ್ಯೂಟೆಕ್ಸ್ ಆ್ಯಪ್ ನಲ್ಲಿ ಸಾಲ ನೀಡಿದ್ದ ವಂಚಕ, 35 ಲಕ್ಷ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದ. ಇದರಿಂದ ಚಿಂತೆಗೀಡಾಗಿ ಅನಾರೋಗ್ಯಕ್ಕೊಳಗಾಗಿದ್ದ ಈಶಾನ್, ತಂದೆಗೆ ವಿಷಯ ತಿಳಿಸಿದ್ದರು.
ಮಗನ ಆರೋಗ್ಯವೇ ಮುಖ್ಯ ಎಂದು ತಂದೆ ಶ್ರೀಗಿರಿಲಿಂಗ ಅವರು, ತಮ್ಮ ಹಾಗೂ ಪತ್ನಿಯ ಖಾತೆಗಳಿಂದ ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್ ಕಂಪನಿಗೆ 19.87 ಲಕ್ಷ ಹೂಡಿಕೆ ಮಾಡಿದ್ದರು. ಆಗ ವಂಚಕ ಅಷ್ಟೂ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/08/2022 05:51 pm