ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ನೊಂದಿದ್ದ ಯುವಕನೊಬ್ಬ ಹೈಟೆನ್ಶನ್ ವೈರ್ ಮುಟ್ಟಲು ಯತ್ನಿಸಿದ್ದಾನೆ. ಇದನ್ನು ಅಚಾನಕ್ ಆಗಿ ಗಮನಿಸಿದ ಹೆಸ್ಕಾಂ ಅಧಿಕಾರಿ ಆಂಜನಪ್ಪ ಅವರು ತಮ್ಮ ಕಚೇರಿಗೆ ಕೂಡಲೇ ವಿಷಯ ತಿಳಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಮೂಲಕ ಆತ್ಮಗತ್ಯೆಗೆ ಯತ್ನಿಸುತ್ತಿದ್ದ ಎನ್ನಲಾದ ಯುವಕನ ಪ್ರಾಣ ಉಳಿದಿದೆ.
ಈ ಘಟನೆ ಹುಬ್ಬಳ್ಳಿಯ ಬಿಡ್ನಾಳದಲ್ಲಿ ಇಂದು (ಶನಿವಾರ) ಸಂಜೆ ನಡೆದಿದೆ. ರಾಘವೇಂದ್ರ ಬಳ್ಳಾರಿ ಎಂಬ ಯುವಕ ಹೈಟೆನ್ಶನ್ ವೈರ್ ಮುಟ್ಟಲು ಹೋದ ಯುವಕ. ಇದನ್ನು ಗಮನಿಸಿದ ಅಧಿಕಾರಿ ಆಂಜನಪ್ಪ ಅವರು ಕೂಡಲೇ ಹೆಸ್ಕಾಂನ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್‌ಕುಮಾರ್ ಬಿ ಹಾಗೂ ನೂಲ್ವಿ ಸೆಕ್ಷನ್ ಆಫೀಸರ್ ಕಾಶಿನಾಥ್ ಪಿಕ್ಕಲಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಬಿಡ್ನಾಳ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದಾದ ನಂತರವೂ ಯುವಕ ವೈರ್‌ಅನ್ನು ಸ್ಪರ್ಶಿಸಿದ್ದಾನೆ. ಆದ್ರೆ ಅಷ್ಟೊತ್ತಿಗಾಗಲೇ ವಿದ್ಯುತ್ ಸಂಪರ್ಕ ಕಡಿHHHತಗೊಂಡಿದೆ.
ಕೂಡಲೇ ಆತನನ್ನು ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಟ್ಟಾರೆ ಹೆಸ್ಕಾಂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಯುವಕನ ಜೀವ ಉಳಿದಂತಾಗಿದೆ.
Kshetra Samachara
06/08/2022 10:53 pm