ಧಾರವಾಡ: ಆ ರೈತ ತನಗಿದ್ದ ಜಮೀನನ್ನೇ ನಂಬಿ ಕೃಷಿ ಮಾಡ್ತಾ ಇದ್ದ. ಒಳ್ಳೆಯ ಫಲವತ್ತಾದ ಭೂಮಿ. ಭೂಮಿಗೆ ಬಂಗಾರದ ಬೆಲೆ ಕೂಡ ಇದೆ. ಹೀಗಿರುವಾಗ ಈ ರೈತ ಓರ್ವ ವ್ಯಕ್ತಿಯನ್ನು ನಂಬಿ ಮನೆಯ ಸದಸ್ಯನಂತೆ ಕಾಣ್ತಾ ಇದ್ದ. ಆ ವ್ಯಕ್ತಿ ರೈತನನ್ನು ನಂಬಿಸಿ ಕೊನೆಗೆ ಕತ್ತು ಕೊಯ್ಯುವ ಕೆಲಸ ಮಾಡಿದ್ದಾನೆ.
ಯಾರು ಆತ? ಯಾವ ಸ್ಟೋರಿ ಇದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಈ ದೃಶ್ಯಗಳಲ್ಲಿ ಕಾಣುತ್ತಿರುವ ರೈತನ ಹೆಸರು ನಾಗಪ್ಪ ಸೊಗಲದ. ಇವರು ಮೂಲತಃ ಧಾರವಾಡ ತಾಲೂಕಿನ ಹಂಗರಕಿ ಗ್ರಾಮದವರು. ಹೊಸವಾಳ ಗ್ರಾಮದಲ್ಲಿ 15 ಎಕರೆ ಜಮೀನು ಹೊಂದಿರುವ ನಾಗಪ್ಪನನ್ನು ನಂಬಿಸಿದ ಶಿಂಗನಹಳ್ಳಿ ಗ್ರಾಮದ ಮಹಾದೇವ ದಂಡಿನ, ಆ ಹೊಲದಲ್ಲಿ ವಿಂಡ್ ಫ್ಯಾನ್ ಹಾಕೋಣ ಅದರಿಂದ ವರ್ಷಕ್ಕೆ 7 ಲಕ್ಷ ಬಾಡಿಗೆ ಬರುತ್ತದೆ ಎಂದು ನಂಬಿಸಿ ಆ ರೈತನಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೊಲ ನೋಂದಣಿ ಮಾಡಿಸಿದ್ದಾನೆ. ಇದಕ್ಕಾಗಿ ಮುಂಬೈನಿಂದ ರಿತೇಶ್ ಬಾನುಶಾಲಿ ಎಂಬಾತನನ್ನೂ ಕರೆದುಕೊಂಡು ಬಂದಿದ್ದ ನೋಂದಣಿ ಮಾಡಿಸುವ ಸಂದರ್ಭದಲ್ಲಿ ರೈತನಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರಂತೆ. ಆ ನಂತರದ ದಿನಗಳಲ್ಲಿ ರೈತ ನಾಗಪ್ಪ ಸೊಗಲದನ ಬ್ಯಾಂಕ್ ಖಾತೆಗೆ ಮುಂಬೈ ಮೂಲದ ರಿತೇಶ್ ಎಂಬಾತ 59 ಲಕ್ಷ ಹಣ ವರ್ಗಾವಣೆ ಮಾಡಿದ್ದಾನೆ. ಈ ರೀತಿ ವರ್ಗಾವಣೆಯಾದ ಹಣವನ್ನು ಮಹಾದೇವ ದಂಡಿನ ಹಾಗೂ ಆತನ ಪತ್ನಿ ಪಾರ್ವತಿ ದಂಡಿನ ಮರಳಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮುಂಬೈ ಮೂಲದ ವ್ಯಕ್ತಿ, ಆ ರೈತನಿಗೆ ನಾನು ನಿನ್ನ ಜಮೀನನ್ನು 85 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದೇನೆ ಎಂದು ನೋಟಿಸ್ ಕಳಿಸಿದಾಗಲೇ ರೈತನಿಗೆ ಸತ್ಯ ಸಂಗತಿ ಗೊತ್ತಾಗಿದೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ರೈತ ನಾಗಪ್ಪ, ಗರಗ ಠಾಣೆಯಲ್ಲಿ ಮಹಾದೇವ ದಂಡಿನ ಹಾಗೂ ಆತನ ಪತ್ನಿ ಪಾರ್ವತಿ ದಂಡಿನ ಮತ್ತು ಮುಂಬೈ ಮೂಲದ ರಿತೇಶ್ ಬಾನುಶಾಲಿ ಎಂಬಾತನ ಮೇಲೆ ದೂರು ದಾಖಲಿಸಿದ್ದಾನೆ.
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ರೀತಿ ಮೋಸಕ್ಕೆ ಒಳಗಾದ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದ್ದು, ಆತನಿಗೆ ನ್ಯಾಯ ಸಿಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
07/07/2022 09:56 pm