ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ ಕಾರಣವಿಲ್ಲದೆ ರೈಲಿನ ಅಲಾರಾಂ ಸರಪಳಿ ಎಳೆದ ಮೂವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ.
ಹೌದು, ಬೆಳಗಾವಿ ಯಾರ್ಡ್‌ನಲ್ಲಿ ಹಜರತ್ ನಿಜಾಮುದ್ದೀನ್ - ವಾಸ್ಕೋ ಡ ಗಾಮಾ (12780) ಹಾಗೂ ಖಾನಾಪುರ - ದೇಸೂರು ಮಧ್ಯೆ ಬೆಂಗಳೂರು - ಬೆಳಗಾವಿ ಎಕ್ಸ್‌ಪ್ರೆಸ್ (20653) ಹೊಸಪೇಟೆಯಲ್ಲಿ ಹಾಗೂ ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್‌ಪ್ರೆಸ್ ( 16591 ) ರೈಲಿನಲ್ಲಿ ಸಕಾರಣವಿಲ್ಲದೆ ಅಲಾರಾಂ ಸರಪಳಿ ಎಳೆಯಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಕಾಯ್ದೆ ಸೆಕ್ಷನ್ 141 ರಡಿ ಮೂವರನ್ನು ಬಂಧಿಸಲಾಗಿದೆ. ರೈಲುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಲಾರಾಂ ಸರಪಳಿ ಅಳವಡಿಸಲಾಗಿದ್ದು, ಪ್ರಯಾಣದ ಸಂದರ್ಭದಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿ ತುರ್ತು ಸಂದರ್ಭಗಳಲ್ಲಿ ಬಳಸಬಹುದು. ಸರಿಯಾದ ಮತ್ತು ಸಮರ್ಪಕ ಕಾರಣವಿಲ್ಲದೆ ಅಲಾರಾಂ ಸರಪಳಿ ಎಳೆಯುವುದು ಶಿಕ್ಷಾರ್ಹ ಅಪರಾಧ.
ಈ ರೀತಿಯ ಅಪರಾಧಕ್ಕೆ ಒಂದುವರ್ಷ ಕಾರಾಗೃಹ ಶಿಕ್ಷೆ ಅಥವಾ 1,000 ರೂ. ವರೆಗೆ ದಂಡ ಅಥವಾ ಎರಡನ್ನು ಸಹ ವಿಧಿಸಬಹುದಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
Kshetra Samachara
29/06/2022 10:42 am