ಧಾರವಾಡ: ತನ್ನ ಸರಸ ಸಲ್ಲಾಪಕ್ಕೆ ಪತಿ ಅಡ್ಡವಾಗುತ್ತಿದ್ದಾನೆ ಎಂದು ತನ್ನ ಪತಿಯನ್ನೇ ಹೆಂಡತಿಯೊಬ್ಬಳು ಹತ್ಯೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದ ಯಲ್ಲಪ್ಪ ಹಗೆದಾರ ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಈತನ ಪತ್ನಿ ಸರಸ್ವತಿ, ಗೋಪಾಲ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಸಂಬಂಧಕ್ಕೆ ಪತಿ ಅಡ್ಡಲಾಗುತ್ತಿದ್ದಾನೆ ಎಂದು ಪತ್ನಿ ಆಕೆಯ ಪ್ರಿಯಕರ ಸೇರಿಕೊಂಡು ಯಲ್ಲಪ್ಪನನ್ನು ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ಸರಸ್ವತಿಯ ಅಪ್ರಾಪ್ತ ಬಾಲಕ ಕೂಡ ಸಾಥ್ ನೀಡಿದ್ದಾನೆ.
ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಯಲ್ಲಪ್ಪ ಕಾಣೆಯಾಗಿದ್ದಾನೆ ಎಂದು ದೂರು ಸಹ ದಾಖಲಾಗಿತ್ತು. ಆದರೆ, ಯಲ್ಲಪ್ಪನ ಮೃತ ದೇಹ ಇಂದು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಮಲಪ್ರಭಾ ನದಿಯಲ್ಲಿ ಪತ್ತೆಯಾಗಿದೆ.
ಕೊಲೆ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೂವರೂ ಆರೋಪಿಗಳು ಯಲ್ಲಪ್ಪನನ್ನು ಹತ್ಯೆ ಮಾಡಿ, ಕೈ, ಕಾಲು ಕಟ್ಟಿ ಬೈಲಹೊಂಗಲ ಸಮೀಪದ ಮಲಪ್ರಭಾ ನದಿಯಲ್ಲಿ ಎಸೆದು ಹೋಗಿದ್ದರು. ತನಿಖೆ ವೇಳೆ ಈ ಸತ್ಯ ಬಯಲಾಗಿದ್ದು, ಇದೀಗ ಮೂವರೂ ಆರೋಪಿಗಳನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
16/06/2022 10:38 pm