ಹುಬ್ಬಳ್ಳಿ: ಮದುವೆಯಾದ ಮಹಿಳೆಗೆ ಬೆದರಿಸಿ, ಅವಳ ಮಗನ ಸಮೇತ ಮಹಾರಾಷ್ಟ್ರಕ್ಕೆ ಕರೆದೊಯ್ದು ತನ್ನ ಜೊತೆಯೇ ಇರಬೇಕು ಎಂದು ಮಾನಸಿಕ ಹಿಂಸೆ ಹಾಗೂ ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಅವನ ಸಂಬಂಧಿಕರ ವಿರುದ್ಧ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಮೀರಜ್ನ ಸುನಿಲ್ ಡೋರಕರ್ ಹಾಗೂ ಸರಿತಾ ಕದಂ, ಮಹೇಶ್ ಕದಂ, ಪರಶುರಾಮ ಡೋರಕರ್, ಸುರೇಶ ಡೋರಕರ್ ವಿರುದ್ಧ ಗೋಕುಲ ರಸ್ತೆ ಮಹಿಳೆ ದೂರು ನೀಡಿದ್ದಾರೆ.
ಘಟಪ್ರಭಾದ ತವರು ಮನೆಯಲ್ಲಿ ಇದ್ದಾಗ ಮಹಿಳೆ ದೂರದ ಸಂಬಂಧಿಯಾದ ಸುನಿಲ್, ಪರಶುರಾಮ ಮತ್ತು ಸುರೇಖಾ ಅವರ ಜೊತೆ ಮಲ್ಲಿಕ್ಜಾನ್ ಬಾಬಾ ದರ್ಗಾಕ್ಕೆ ತೆರಳಿದ್ದರು. ಆಗ ಸುನಿಲ್, ಮಹಿಳೆ ಮೊಬೈಲ್ನಿಂದ ತನ್ನ ಮೊಬೈಲ್ಗೆ ‘ಐ ಲವ್ ಯೂ’ ಎಂದು ಮೆಸೆಜ್ ಕಳುಹಿಸಿಕೊಂಡು, ಮಹಿಳೆಯೇ ಮೆಸೆಜ್ ಮಾಡಿದ್ದಾಳೆ ಎಂದು, ಪತಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದನು. ಭಯಗೊಂಡ ಮಹಿಳೆ ಏಪ್ರಿಲ್ ತಿಂಗಳಲ್ಲಿ 2 ವರ್ಷದ ಮಗನೊಂದಿಗೆ ಹುಬ್ಬಳ್ಳಿಯ ಪತಿ ಮನೆ ತೊರೆದಿದ್ದಳು.
ಆ ಸಂದರ್ಭ ಮಹಿಳೆ ಪತಿಗೆ ದೂರವಾಣಿಯಲ್ಲಿ ಸಂಪರ್ಕಿಸಲು ಮುಂದಾದಾಗ ಸುನಿಲ್ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಅವಳ ಜೊತೆ ಫೋಟೊ ತೆಗೆಸಿಕೊಂಡು, ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದನು. ವಕೀಲರ ಸಹಾಯದಿಂದ ಮೀರಜ್ನ ಮಹಾತ್ಮಾಗಾಂಧಿ ಚೌಕ್ ಪೊಲೀಸ್ ಠಾಣೆಗೆ ತೆರಳಿ ಸ್ವ ಇಚ್ಛೆಯಿಂದ ಬಂದಿರುವುದಾಗಿ ಬಾಂಡ್ ಮೇಲೆ ಸಹಿ ಹಾಕಿಸಿಕೊಂಡಿದ್ದನು. ಇದಕ್ಕೆ ಅವನ ಸಂಬಂಧಿಕರು ಸಹಾಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
07/06/2022 02:07 pm