ಹುಬ್ಬಳ್ಳಿ: ಆತ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ. ಆತನ ಹೆಂಡತಿ ಈಗ ಮೂರು ತಿಂಗಳ ಗರ್ಭಿಣಿ. ಇನ್ನೇನು ಮನೆಗೆ ಕಂದನ ಆಗಮನಕ್ಕೆ ಎದುರು ನೋಡುತ್ತಾ ಹೆಂಡತಿ ಹಾಗೂ ಮನೆಯವರ ಜೊತೆಗೆ ಚನ್ನಾಗಿಯೇ ಜೀವನ ನಡೆಸುತ್ತಿದ್ದ. ತಾನಾಯಿತು ತನ್ನ ಕೆಲಸ ಆಯ್ತು ಎಂದುಕೊಂಡ ಹೊಲ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿ ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಕೊಲೆಯಾಗಿರುವ ವ್ಯಕ್ತಿ ಯಾರು...? ಅಲ್ಲಿ ಆಗಿದ್ದಾದರೂ ಏನು ಅಂತೀರಾ ಹೇಳ್ತೀವಿ ಕೇಳಿ.
ಹೀಗೆ ಮಗನನ್ನು ಕಳೆದುಕೊಂಡ ದುಃಖದಲ್ಲಿ ಆಕ್ರೋಶಗೊಂಡ ತಾಯಿ. ಗ್ರಾಮದ ಸುತ್ತಲೂ ಸೂತಕದ ವಾತಾವರಣ. ಹೊಲಮನೆ ಕೆಲಸ ಮಾಡಿಕೊಂಡಿದ್ದ ಶಂಭು ಕೊಲೆಯಾಗಿದ್ದಾನೆ ಎಂಬುವಂತ ಪಿಸು ಮಾತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಹೊರವಲಯದಲ್ಲಿ ನಡೆದ ಅದೊಂದು ಬೀಕರ ಕೊಲೆ. ಹೌದು.. ನೂಲ್ವಿ ಹಾಗೂ ಅದರಗುಂಚಿ ಗ್ರಾಮದ ಮಧ್ಯದಲ್ಲಿರುವ ರಸ್ತೆ ಪಕ್ಕದಲ್ಲಿಯೇ ಶಂಭು ಕಮಡೊಳ್ಳಿ(34) ಎಂಬಾತನನ್ನು ಮಾರಕಾಸ್ತ್ರದಿಂದ ಕೊಲೆ ಮಾಡಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಲಾಗಿದೆ ಎಂಬುವಂತ ಶಂಕೆ ವ್ಯಕ್ತವಾಗಿದೆ. ಹೋದ ವರ್ಷವಷ್ಟೇ ಮದುವೆಯಾಗಿದ್ದ ಶಂಭು, ಹೊಲ ಮನೆ ಕೆಲಸ ಮಾಡಿಕೊಂಡ ತಾಯಿ ಹಾಗೂ ಹೆಂಡತಿ ಜೊತೆಗೆ ಚೆನ್ನಾಗಿಯೇ ಇದ್ದ ಆದರೆ ಅದ್ಯಾವ ವಕ್ರದೃಷ್ಟಿ ಆ ಕುಟುಂಬದ ಮೇಲೆ ಬಿದ್ದಿತೋ ಗೊತ್ತಿಲ್ಲ. ಶಂಭು ಕಮಡೊಳ್ಳಿ ದುಷ್ಕರ್ಮಿಗಳಿಗೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಆದರೆ ಆತನ ತಾಯಿ ಮಲ್ಲವ್ವ ಮಾತ್ರ ಈ ಕೊಲೆಯ ಹಿಂದೆ ಯಾರದೋ ಕೈವಾಡವಿದೆ ಎಂಬುವಂತೇ ತನ್ನ ಮನದಾಳದ ಮಾತನ್ನು ದುಃಖದಲ್ಲಿಯೇ ಹೊರ ಹಾಕಿದ್ದಾಳೆ.
ಇನ್ನೂ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಹೇಳಿ ಹೋದ ವ್ಯಕ್ತಿ ಬೆಳಿಗ್ಗೆ ಪತ್ತೆಯಾಗಿದ್ದು ಮಾತ್ರ ಹೆಣವಾಗಿ. ಮಡದಿಯ ಜೊತೆ ಮಾತನಾಡಿ ಊಟ ಮುಗಿಸಿಕೊಂಡು ಹೋದ ಶಂಭುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಯಾವುದೇ ಗಲಾಟೆ ಹಾಗೂ ಜಗಳ ಇಲ್ಲದೇ ಶಾಂತವಾಗಿದ್ದ ನೂಲ್ವಿಯ ಹೊರ ವಲಯದಲ್ಲಿ ನೆತ್ತರು ಹರಿದಿದೆ. ಗಂಡನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಡದಿ ಗಾಬರಿಗೊಂಡಿದ್ದಾಳೆ. ಈ ಕೊಲೆಯ ಬಗ್ಗೆ ನನಗೆ ಗೊತ್ತಾಗಿದ್ದು ಬೆಳಿಗ್ಗೆಯೇ ಎನ್ನುತ್ತಾಳೆ ಮೃತ ಶಂಭುನ ಹೆಂಡತಿ.
ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಕೊಲೆ ನಡೆದಿರುವ ಬಗ್ಗೆ ಈಗಾಗಲೇ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯ ಬಗ್ಗೆ ತನಿಖೆ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವುದಾಗಿ ಕೂಡ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಹೊರಗೆ ಹೋಗಿ ಬರುವುದಾಗಿ ಹೇಳಿದ್ದ ಶಂಭು ಮನೆಗೆ ಹೆಣವಾಗಿ ಬಂದಿದ್ದಾನೆ. ಶಾಂತವಾಗಿದ್ದ ಊರಲ್ಲಿ ನೆತ್ತರು ಹರಿಸಿದ ದುಷ್ಕರ್ಮಿಗಳಿಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆಯ ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ.
Kshetra Samachara
14/05/2022 07:22 pm