ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಇತ್ತೀಚೆಗೆ ವಾಣಿಜ್ಯ ಚಟುವಟಿಕೆಗಳಿಗಿಂತ ಕ್ರೈಂ ಚಟುವಟಿಕೆಗಳೇ ಹೆಚ್ಚಾಗಿವೆ. ಕ್ಷುಲ್ಲಕ ಕಾರಣಕ್ಕೆ ಕ್ರೈಂ ನಡೆಯುತ್ತಿವೆ. ಅಪರಾಧ ಪತ್ತೆಗೆ ಈಗ ಪೊಲೀಸ್ ಇಲಾಖೆ ಹೊಸ ನಿರ್ಧಾರಕ್ಕೆ ಮುಂದಾಗಿದೆ. ಹಾಗಿದ್ದರೇ ಪೊಲೀಸ್ ಇಲಾಖೆಯ ನಿರ್ಧಾರ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಶೀಘ್ರವೇ ಪತ್ತೆಹಚ್ಚಲು, ಸಂಶಯಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹದಲ್ಲಿ ಪೊಲೀಸ್ ಇಲಾಖೆ ಮುಂದಾಗಿದೆ.
ಕಮಿಷನರೇಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುವ ವ್ಯಕ್ತಿಗಳು, ಕಳುವಿಗೆ ಹೊಂಚು ಹಾಕುತ್ತಿರುವ (ಕಾಗ್ನೇಜೇಬಲ್ ಪ್ರಕರಣ) ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬೆರಳಚ್ಚು ಸಂಗ್ರಹಿಸುತ್ತಿದ್ದಾರೆ.
ಮುಖ್ಯವಾಗಿ ರಾಜಸ್ಥಾನ, ಬಿಹಾರ, ಮಧ್ಯಪ್ರದೇಶಗಳಿಂದ ವಲಸೆ ಬಂದ ಬೀದಿಬದಿ ವ್ಯಾಪಾರಸ್ಥರ ಬೆರಳಚ್ಚು ಕಲೆಹಾಕುವಲ್ಲಿ ಕಮಿಷನರೇಟ್ ನಿರತವಾಗಿದೆ.
ಈಗಾಗಲೇ ಉಪನಗರ ಶಹರ, ಕೇಶ್ವಾಪುರ, ಗೋಕುಲ, ವಿದ್ಯಾನಗರ, ಹಳೇಹುಬ್ಬಳ್ಳಿ, ವಿದ್ಯಾಗಿರಿ, ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಮಿಷನರೇಟ್'ನ ಬಹುತೇಕ ಎಲ್ಲ ಠಾಣೆಗಳಲ್ಲೂ ಬೆರಳಚ್ಚು ಸಂಗ್ರಹ ಯಂತ್ರವಿದ್ದು, ಈವರೆಗೆ 200ಕ್ಕೂ ಹೆಚ್ಚು ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಬೆರಳಚ್ಚು ಯಂತ್ರದ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ಆರೋಪಿಯ ಎಲ್ಲಾ ಬೆರಳಚ್ಚನ್ನು ಸಂಗ್ರಹಿಸಬಹುದಾಗಿದೆ.
ಆರೋಪಿಯನ್ನ ವಶಕ್ಕೆ ಪಡೆದ ನಂತರ ಅವನ ಬೆರಳುಗಳ ತುದಿಯನ್ನು ಯಂತ್ರದ ಮೇಲಿಟ್ಟರೆ, ಅವುಗಳ ಫೋಟೊ ತನ್ನಷ್ಟಕ್ಕೆ ತಾನೇ ಕಂಪ್ಯೂಟರ್‌ನಲ್ಲಿ ಸೇವ್ ಆಗುತ್ತದೆ.
ಪ್ರತಿ ಠಾಣೆಯಲ್ಲೂ ಸಂಗ್ರಹಿಸುವ ಬೆರಳಚ್ಚನ್ನು ಬೆಂಗಳೂರು ಹಾಗೂ ದೆಹಲಿಯಲ್ಲಿರುವ ಬೆರಳಚ್ಚು ಘಟಕಕ್ಕೆ ರವಾನಿಸಲಾಗುತ್ತದೆ. ಇದರಿಂದ ಆರೋಪಿ ಪತ್ತೆ ಸುಲಭವಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಇತ್ತೀಚೆಗೆ ಮೂರು ಮನೆ ಕಳವು ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಮೂರೂ ಸ್ಥಳಗಳಲ್ಲಿ ಒಂದೇ ವ್ಯಕ್ತಿಯ ಬೆರಳಚ್ಚು ಇರುವುದು ಬೆಂಗಳೂರಿನ ಬೆರಳಚ್ಚು ಘಟಕದಲ್ಲಿ ಪತ್ತೆಯಾಗಿತ್ತು. ದೆಹಲಿಯಲ್ಲಿರುವ ಬೆರಳಚ್ಚು ಘಟಕಕ್ಕೆ ಅದನ್ನು ಕಳುಹಿಸಿಕೊಟ್ಟಾಗ, ಆರೋಪಿಯ ಮಾಹಿತಿ ಲಭ್ಯವಾಗಿದೆ. ಅದನ್ನಾಧರಿಸಿಯೇ, ಕೇಶ್ವಾಪುರ ಠಾಣೆ ಪೊಲೀಸರು ರಾಜಸ್ಥಾನದಿಂದ ಮೂವರು ಆರೋಪಿತರನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
Kshetra Samachara
13/04/2022 09:07 am