ಪಬ್ಲಿಕ್ ನೆಕ್ಸ್ಟ್ ವಿಶೇಷ
ಹುಬ್ಬಳ್ಳಿ : ಅವಳಿ ನಗರದಲ್ಲಿ ಅಪ್ತಾಪ್ತೆಯರ ಅಪಹರಣ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗ ತೊಡಗಿದ್ದು ನಿಜಕ್ಕೂ ಆಘಾತಕಾರಿ. ಮರ್ಯಾದೆಗೆ ಅಂಜಿಯೋ, ಅಪಹರಣಕಾರರ ಹೆದರಿಕೆ ಬೆದರಿಕೆಗೆ ಮಣಿದು ಅಪಹೃತ ಬಾಲಕಿಯರ ಪಾಲಕರು ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ.
ಇನ್ನು ದೂರು ನೀಡಿದರೂ ದುಷ್ಟರೊಂದಿಗೆ ಶಾಮೀಲಾಗಿ ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳು ಪ್ರಕರಣಗಳನ್ನು ಮುಚ್ಚಿ ಹಾಕುವ ಹೇಯ ಕೃತ್ಯವೆಸಗುತ್ತಿರುವುದು ದಕ್ಷ ಪೊಲೀಸ್ ಆಯುಕ್ತರಾದ ಲಾಬೂ ರಾಮ್ ಅವರಿಗೆ ಕಳಂಕ ತರುತ್ತಿದ್ದಾರೆಂದರೂ ತಪ್ಪಾಗದು.
ಕೇವಲ 72 ಗಂಟೆಗಳ ಹಿಂದೆ ನಗರದ ಕುಖ್ಯಾತ ರೌಡಿಯೊಬ್ಬ ಅಪ್ರಾಪ್ತೆಯನ್ನು ಕಾರವಾರ ರಸ್ತೆಯಲ್ಲಿರುವ ಗ್ರಾಮದ ತನ್ನ ಫಾರ್ಮ ಹೌಸ್ ವೊಂದಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ದುಷ್ಕೃತ್ಯ ಎಸಗಿದವ ರೌಡಿ ಯಾರು? ಅವಳನ್ನು ಅಪಹರಿಸಿ ಎಲ್ಲಿಟ್ಟದ್ದ ಹಾಗೂ ಯಾವ ಪೊಲೀಸ್ ಅಧಿಕಾರಿ ಆತನಿಗೆ ಮಾಹಿತಿ ನೀಡಿ ಆತನನ್ನು ಸೇಫ್ ಮಾಡಿದ ಎಂಬುದು ಪಬ್ಲಿಕ್ ನೆಕ್ಸ್ಟ್ ಗೆ ಗೊತ್ತಿದ್ದರೂ ಆ ವಿವರ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಈ ಬಗ್ಗೆ ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.
ಆ ಕಾಮಪಿಪಾಸಿ ಬಾಲಕಿಯೊಂದಿಗಿದ್ದ ಫೋಟೊಗಳನ್ನು ಆಕೆಯ ತಂದೆಗೆ ಕಳಸಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾನೆ. ಆದರೆ ಬಾಲಕಿ ತಂದೆ ತತಕ್ಷಣ ಪೊಲೀಸ್ ಠಾಣೆಗೆ ಧಾವಿಸಿ ಘಟನೆ ವಿವರಿಸಿದ್ದಾನೆ. ದುರಾದೃಷ್ಟವೆಂದರೆ ಠಾಣೆ ಸಿಪಿಐ ಪ್ರಕರಣ ದಾಖಲಿಸಿಕೊಂಡು ದುಷ್ಟನನ್ನು ಬಂಧಿಸುವ ಬದಲು, ಆತನಿಗೆ ಫೋನ್ ಮಾಡಿ ಆತನನ್ನು ರಕ್ಷಿಸಿದ್ದಾನೆ. ಅಷ್ಟೇ ಅಲ್ಲ ಸಿಪಿಐ ಆ ಗ್ರಾಮದಲ್ಲಿರುವ ಆತನ ಫಾರ್ಮ ಹೌಸ್ಗೂ ಭೇಟಿ ನೀಡದ್ದಾರೆಂಬ ಮಾಹಿತಿ ಇದೆ.
ಪೊಲೀಸ್ ಅಧಿಕಾರಿಯ ಫೋನ್ ಬರುತ್ತಲೆ ಆ ವ್ಯಕ್ತಿ ಬಾಲಕಿಯನ್ನು ಬಿಡುಗಡೆ ಮಾಡಿದ್ದಾನಲ್ಲದೆ ಆಕೆಗೆ ಹಾಗೂ ಆಕೆ ತಂದೆಗೆ ಪ್ರಕರಣ ಬಯಲು ಮಾಡದಂತೆ ಧಮಕಿ ಹಾಕಿದ್ದಾನೆ.
ಪೊಲೀಸ್ ಕಮಿಶ್ನರ್ ಲಾಬೂ ರಾಮ್ ಅವರಿಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ತಪ್ಪು ದಾರಿಗೆಳೆದಿರಬಹುದು. ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಎಲ್ಲರ ಬಣ್ಣ ಬಯಲಾಗುವುದು ಖಚಿತ. ಇಲ್ಲವಾದರೆ ಅವಳಿ ನಗರದ ಗೂಂಡಾಗಳಿಗೆ ಕುಮ್ಮಕ್ಕು ನೀಡದಂತಾಗುತ್ತದೆ ಅಲ್ಲವೆ?
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2022 08:22 pm